ADVERTISEMENT

ಬೀದರ್‌ ನಗರಸಭೆ ಇನ್ಮುಂದೆ ಮಹಾನಗರ ಪಾಲಿಕೆ

ಬೀದರ್‌ ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 16 ಗ್ರಾಮಗಳ ಸೇರ್ಪಡೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಫೆಬ್ರುವರಿ 2025, 5:05 IST
Last Updated 1 ಫೆಬ್ರುವರಿ 2025, 5:05 IST
ಬೀದರ್‌ ನಗರಸಭೆ ಕಚೇರಿ
ಬೀದರ್‌ ನಗರಸಭೆ ಕಚೇರಿ   

ಬೀದರ್‌: ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಈ ಭಾಗದ ಜನತೆಯ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ.

ಮಹಾನಗರ ಪಾಲಿಕೆ ರಚನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಆಕ್ಷೇಪಣೆಗೆ 30 ದಿನ ಕಾಲಾವಕಾಶ ಕೊಟ್ಟು, ಅಂತಿಮ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಯಷ್ಟೇ ಬಾಕಿ ಉಳಿದಿದೆ. ಬಳಿಕ ಪೂರ್ಣ ಪ್ರಮಾಣದಲ್ಲಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬರಲಿದೆ.

2024ರ ಸೆಪ್ಟೆಂಬರ್‌ 17ರಂದು ಕಲಬುರಗಿಯಲ್ಲಿ ಜರುಗಿದ ವಿಶೇಷ ಸಂಪುಟ ಸಭೆಯಲ್ಲಿ ಬೀದರ್‌ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಐದು ತಿಂಗಳ ಬಳಿಕ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ADVERTISEMENT

ಈ ಹಿಂದೆ 12 ಗ್ರಾಮಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಕನಿಷ್ಠ ಮೂರು ಲಕ್ಷ ಜನಸಂಖ್ಯೆ ದಾಟಬೇಕೆಂಬ ನಿಯಮಕ್ಕೆ ಅದರಿಂದ ತೊಡಕಾಗಿತ್ತು. ಈಗ ಇನ್ನೂ ನಾಲ್ಕು ಗ್ರಾಮಗಳನ್ನು ಹೆಚ್ಚುವರಿಯಾಗಿ ಸೇರಿಸಿದ್ದು, ಒಟ್ಟಾರೆ ಜನಸಂಖ್ಯೆ 3.11 ಲಕ್ಷ ಆಗಲಿದೆ. ಇದರೊಂದಿಗೆ ಮಹಾನಗರ ಪಾಲಿಕೆಗೆ ಇರಬೇಕಾದ ಎಲ್ಲ ಅರ್ಹತೆಗಳನ್ನು ಪೂರೈಸಿದಂತಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಪಾಲಿಕೆ ರಚನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ, ಆದಷ್ಟು ಶೀಘ್ರ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಅದರಂತೆ ಸಂಪುಟದಲ್ಲಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಸಚಿವರು ಹಾಗೂ ಸರ್ಕಾರದ ಕ್ರಮವನ್ನು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸ್ವಾಗತಿಸಿದೆ.

ಏನಾಗಲಿದೆ ಬದಲಾವಣೆ: ಬೀದರ್‌ ನಗರಸಭೆ ಮಹಾನಗರ ಪಾಲಿಕೆಯಾಗಿ ಬದಲಾದ ನಂತರ ಈಗಿನ ಸದಸ್ಯರ ಅವಧಿ ಪೂರ್ಣಗೊಳ್ಳುವವರೆಗೆ ಹೀಗೆಯೇ ಮುಂದುವರೆಯಲಿದೆ. ಚುನಾವಣೆ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆಯಾಗಲಿರುವ 16 ಗ್ರಾಮಗಳನ್ನು ಸೇರಿಸಿಕೊಂಡು, ವಾರ್ಡ್‌ಗಳನ್ನು ಪುನರ್‌ ರಚಿಸಲಾಗುತ್ತದೆ. ಸಹಜವಾಗಿಯೇ ವ್ಯಾಪ್ತಿ ಹಿಗ್ಗುವುದರಿಂದ ಸದಸ್ಯರ ಸಂಖ್ಯೆಯೂ ಹೆಚ್ಚಾಗಲಿದೆ.

ಇನ್ನು, ನಗರಸಭೆಗೆ ಹೋಲಿಸಿದರೆ ಪಾಲಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಸರ್ಕಾರ ಬಜೆಟ್‌ ಮೀಸಲಿಡಬೇಕಾಗುತ್ತದೆ. ಇನ್ನು, ಹೊಸದಾಗಿ ಸೇರ್ಪಡೆಯಾಗಲಿರುವ ಗ್ರಾಮಗಳ ತೆರಿಗೆ ಕೂಡ ಪಾಲಿಕೆಗೆ ಹರಿದು ಬರಲಿದೆ. ಹೀಗೆ ಹೆಚ್ಚಿನ ಅನುದಾನ ಹರಿದು ಬರುವುದರಿಂದ ನಗರದಲ್ಲಿ ಮೂಲಸೌಕರ್ಯ ಸುಧಾರಣೆ ಮಾಡಲು ಅನುಕೂಲವಾಗಲಿದೆ.

ಮಹಾನಗರ ಪಾಲಿಕೆಗೆ ಸೇರಲಿರುವ ಆರು ಗ್ರಾಮ
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿವರ ಗ್ರಾಮ ಪಂಚಾಯಿತಿ ಹೆಸರು; ಗ್ರಾಮಗಳು ಅಷ್ಟೂರ; ಓಡವಾಡ ತಾಜಲಾಪೂರ ಅಮಲಾಪೂರ; ಅಮಲಾಪೂರ ಗೋರನಳ್ಳಿ (ಬಿ) ಅಲಿಯಾಬಾದ್‌; ಅಲಿಯಾಬಾದ್‌ ಚೋಂಡಿ ಚೌಳಿ ಗಾದಗಿ; ಶಾಮರಾಜಪೂರ ಸಿಪ್ಪಲಗೇರಾ ಮಾಮನಕೇರಿ ಕಬೀರವಾಡ ಕೊಳಾರ (ಕೆ); ಕೊಳಾರ (ಕೆ) ನಿಜಾಮಪೂರ ಹಜ್ಜರಗಿ ಕಮಲಪೂರ ಮರಕಲ್‌; ಚಿಕ್ಕಪೇಟೆ
ಆಕ್ಷೇಪಣೆಗೆ ಕಾಲಾವಕಾಶ
ಬೀದರ್‌ ಮಹಾನಗರ ಪಾಲಿಕೆ ರಚನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಅಧಿಸೂಚನೆ ಹೊರಡಿಸುತ್ತದೆ. 30 ದಿನ ಆಕ್ಷೇಪಣೆಗೆ ಅವಕಾಶ ನೀಡಲಾಗುತ್ತದೆ. ಯಾವುದೇ ಆಕ್ಷೇಪಣೆ ಬಾರದಿದ್ದರೆ ಮಹಾನಗರ ಪಾಲಿಕೆಗೆ ಅಂತಿಮ ಅಧಿಸೂಚನೆ ಹೊರಡಿಸುತ್ತದೆ. ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ ಬೀದರ್‌
ಪಾಲಿಕೆಗೆ ಹೊಸ ಕಟ್ಟಡ
ಈಗಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಾಗದಲ್ಲಿಯೇ ಹೊಸ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ನಿರ್ಧಾರ ಕೈಗೊಂಡಿದ್ದು ಕೆಲವೇ ದಿನಗಳಲ್ಲಿ ಭೂಮಿ ಪೂಜೆ ಮಾಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಜಿಲ್ಲಾಧಿಕಾರಿ ಕಚೇರಿಗೆ ಹೊಂದಿಕೊಂಡಂತೆ ಇರುವ ನಗರಸಭೆ ಕಚೇರಿಯ ಜಾಗವನ್ನು ಸೇರಿಸಿ ಹೊಸ ಕಟ್ಟಡ ಕಟ್ಟಲು ಉದ್ದೇಶಿಸಲಾಗಿದೆ. ಇದರಿಂದಾಗಿ ನಗರಸಭೆ ಕಚೇರಿ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರ ಮಾಡಬೇಕಾಗುತ್ತದೆ. ನಗರದ ಹೈದರಾಬಾದ್‌ ರಸ್ತೆಯಲ್ಲಿ ನಗರಸಭೆಗೆ ಸ್ಥಳ ಮೀಸಲಿಟ್ಟಿದ್ದು ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಹೊಸ ಕಾರ್ಪೊರೇಶನ್‌ ಕಟ್ಟಡ ನಿರ್ಮಾಣ ಕೆಲಸ ಕೂಡ ಆರಂಭಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.