
ಬೀದರ್: ಇಲ್ಲಿನ ಸಂಗೀತ ಕಲಾ ಮಂಡಲ ಹಾಗೂ ಕೋಲ್ಕತ್ತದ ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ ಸಂಗೀತ ಕಾರ್ಯಕ್ರಮ ಸಭಿಕರ ಮನಸೂರೆಗೊಳಿಸಿತು.
ಶ್ರೇಯಾ ಚಟರ್ಜಿ ಅವರ ಕಂಚಿನ ಕಂಠದ ಗಾಯನ ಕಾರ್ಯಕ್ರಮ ತಲೆದೂಗುವಂತೆ ಮಾಡಿತು. ಅಶೋಕ ಮುಖರ್ಜಿ ಅವರ ತಬಲಾ ಸಾಥ್ ಹಾಗೂ ಕೃಷ್ಣ ಮುಖೇಡಕರ್ ಅವರ ಹಾರ್ಮೋನಿಯಂ ಇನ್ನಷ್ಟು ಮೆರುಗು ತಂದಿತು. ಇದಾದ ಬಳಿಕ ಅಬೀರ್ ಹುಸೇನ್ ಅವರ ಸರೋದ್ ವಾದನವು ಎಲ್ಲರ ಮನ ತಣಿಸಿತು. ಇದಕ್ಕೆ ವೆಂಕಟೇಶ ಡಿ.ಸಿ. ಅವರು ತಬಲಾ ಸಾಥ್ ನೀಡಿದರು. ಚಳಿಯಲ್ಲೂ ಹೆಚ್ಚಿನ ಸಂಖ್ಯೆಯ ಜನ ಸಂಗೀತದ ರಸಾಸ್ವಾದ ಆಲಿಸಿದರು.
ಗೋರ್ಟಾ ರಾಜಶೇಖರ ಶಿವಾಚಾರ್ಯರು ಜ್ಯೋತಿ ಬೆಳಗಿಸಿ, ಬೀದರ್ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗ ಆರಂಭಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಸಂಬಂಧಿಸಿದವರಿಗೆ ಮನವಿ ಸಲ್ಲಿಸಬೇಕು ಎಂದು ಹೇಳಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ, ಪಂಡಿತ್ ರಾಮುಲು ಗಾದಗೆ, ಪತ್ರಕರ್ತರಾದ ಶಿವಶರಣಪ್ಪ ವಾಲಿ, ಸದಾನಂದ ಜೋಶಿ ಮತ್ತಿತರರು ಪಾಲ್ಗೊಂಡಿದ್ದರು. ರಾಜೇಂದ್ರ ಸಿಂಗ್ ಪವಾರ ಸ್ವಾಗತಿಸಿದರು. ಎಸ್.ವಿ.ಕಲ್ಮಠ ಪ್ರಾಸ್ತಾವಿಕ ಮಾತನಾಡಿದರು. ಎಸ್.ಆರ್. ಸಂಗಮಕರ್ ವಂದಿಸಿದರು. ಡಿ.ಎಸ್. ಜೋಶಿ ನಿರೂಪಿಸಿದರು. ಶರಣಪ್ಪ ಕಮಠಾಣೆ, ವಿದ್ಯಾ ಲದ್ದೆ ಕಲಾವಿದರ ಪರಿಚಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.