ADVERTISEMENT

ಬೀದರ್‌ | ₹1.50 ಕೋಟಿ ಸ್ವತ್ತು ಜಪ್ತಿ, 57 ಆರೋಪಿಗಳ ಬಂಧನ

42 ಕಳವು ಪ್ರಕರಣ ಭೇದಿಸಿದ ಬೀದರ್‌ ಜಿಲ್ಲಾ ಪೊಲೀಸರು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 4:48 IST
Last Updated 11 ಅಕ್ಟೋಬರ್ 2025, 4:48 IST
ಪೊಲೀಸರು ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ಬೀದರ್‌ನಲ್ಲಿ ಶುಕ್ರವಾರ ಮಾಲೀಕರಿಗೆ ಹಸ್ತಾಂತರಿಸಿದರು
ಪೊಲೀಸರು ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ಬೀದರ್‌ನಲ್ಲಿ ಶುಕ್ರವಾರ ಮಾಲೀಕರಿಗೆ ಹಸ್ತಾಂತರಿಸಿದರು   

ಬೀದರ್‌: ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ಒಂಬತ್ತು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 42 ಕಳವು ಪ್ರಕರಣಗಳನ್ನು ಭೇದಿಸಿರುವ ಬೀದರ್‌ ಜಿಲ್ಲಾ ಪೊಲೀಸರು ₹1.50 ಕೋಟಿ ಸ್ವತ್ತು ಜಪ್ತಿ ಮಾಡಿ, 57 ಆರೋಪಿಗಳನ್ನು ಬಂಧಿಸಿದ್ದಾರೆ.

‘ಪ್ರಾಪರ್ಟಿ ಪರೇಡ್‌ ನಡೆಸಿ, ಕಾರ್ಯಾಚರಣೆ ವೇಳೆ ಜಪ್ತಿ ಮಾಡಿದ ಚಿನ್ನಾಭರಣ, ನಗದು ಅದರ ಮಾಲೀಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

42 ಕಳವು ಪ್ರಕರಣಗಳಲ್ಲಿ ಸ್ಥಳೀಯರೊಂದಿಗೆ ಅನ್ಯರಾಜ್ಯದವರು ಸೇರಿ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಭಾಲ್ಕಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಿ 15 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿ, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇದೇ ಠಾಣೆ ವ್ಯಾಪ್ತಿಯಲ್ಲಿ ಒಂದೇ ಮನೆಯಲ್ಲಿ ಕಳ್ಳತನ ಮಾಡಿ ಕದ್ದೊಯ್ದಿದ್ದ 190 ಗ್ರಾಂ ಚಿನ್ನಾಭರಣ, 410 ಗ್ರಾಂ ಬೆಳ್ಳಿ ಆಭರಣ ಪತ್ತೆ ಹಚ್ಚಿ, ಜಪ್ತಿ ಮಾಡಲಾಗಿದೆ. ಜನವಾಡ ಠಾಣೆ ವ್ಯಾಪ್ತಿಯಲ್ಲಿ 40 ಗ್ರಾಂ ಚಿನ್ನಾಭರಣ, ಮೊಬೈಲ್‌ ಸೇರಿದಂತೆ ₹4.66 ಲಕ್ಷ ಸ್ವತ್ತು ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಬಸವಕಲ್ಯಾಣ, ಹೊಕ್ರಾಣ, ಔರಾದ್‌, ಗಾಂಧಿಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ನಡೆದ ಕಳವು ಪ್ರಕರಣ ಭೇದಿಸಿ, 105 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿ, ಮೂವರು ಆರೋಪಿಗಳ ಬಂಧಿಸಲಾಗಿದೆ’ ಎಂದರು.

‘ಭಾಲ್ಕಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ₹4 ಲಕ್ಷ ವಂಚನೆ ಪ್ರಕರಣ ಭೇದಿಸಿ, ಅಲ್ಲೇ ಚಾಲಕ, ಕ್ಲೀನರ್‌ ಆಗಿ ಕೆಲಸ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಇವರಿಬ್ಬರೇ ಕಟ್ಟು ಕತೆ ಸೃಷ್ಟಿಸಿ, ₹4 ಲಕ್ಷ ದರೋಡೆ ಮಾಡಲಾಗಿದೆ ಎಂದು ಮಾಲೀಕರನ್ನು ವಂಚಿಸಿದ್ದರು. ಐಷರ್‌ ವಾಹನ ಹಾಗೂ ನಗದು ಜಪ್ತಿ ಮಾಡಲಾಗಿದೆ. ಭಾಲ್ಕಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಮೋಟಾರ್‌ ಕೇಬಲ್‌ ಪ್ರಕರಣ ಭೇದಿಸಿದ್ದಾರೆ. ಇನ್ನುಳಿದಂತೆ ಜಿಲ್ಲೆಯ ವಿವಿಧೆಡೆ ನಡೆದ ಆಕಳು ಕಳವು, ಪಿಕ್‌ಪಾಕೆಟಿಂಗ್‌ ಸೇರಿದಂತೆ ಇತರೆ ಪ್ರಕರಣಗಳು ಸೇರಿವೆ’ ಎಂದು ಹೇಳಿದರು.

8 ಕಾರು 18 ಬೈಕ್‌ ಜಪ್ತಿ ‘

ಹುಮನಾಬಾದ್‌ ಠಾಣೆ ಪೊಲೀಸರು ಎಂಟು ಕಾರುಗಳನ್ನು ಜಪ್ತಿ ಮಾಡಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಲ್ಯಾಪ್‌ಟಾಪ್‌ ಮೂಲಕ ಕಾರಿನ ಸೆನ್ಸಾರ್‌ ಇನ್‌ ಆ್ಯಕ್ಟಿವ್‌ ಮಾಡಿ ಡೂಪ್ಲಿಕೇಟ್‌ ಕೀ ಬಳಸಿ ಕಳವು ಮಾಡುತ್ತಿದ್ದ. ಒಂದು ಕಾರು ಕರ್ನಾಟಕಕ್ಕೆ ಸೇರಿದ್ದರೆ 2 ಮಹಾರಾಷ್ಟ್ರದ್ದು. ಮಿಕ್ಕುಳಿದ ಐದು ಯಾರಿಗೆ ಸೇರಿದೆ ಎಂಬುದರ ಪತ್ತೆ ಕಾರ್ಯ ನಡೆದಿದೆ’ ಎಂದು ಎಸ್ಪಿ ಪ್ರದೀಪ್‌ ಗುಂಟಿ ವಿವರಿಸಿದರು. ಬೀದರ್‌ ನ್ಯೂಟೌನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ 18 ಬೈಕ್‌ಗಳ ಕಳವು ಪ್ರಕರಣ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸ್ಥಳೀಯ ಸೇರಿದಂತೆ ಇತರೆ ರಾಜ್ಯದ ಇಬ್ಬರನ್ನು ಬಂಧಿಸಲಾಗಿದೆ. 18 ಬೈಕ್‌ ರಿಕವರಿ ಮಾಡಲಾಗಿದ್ದು ಮಾರ್ಕೆಟ್‌ ಗಾಂಧಿ ಗಂಜ್‌ ಠಾಣೆಯ ತಲಾ ಒಂದು ಬೈಕ್‌ ಸೇರಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.