
ಬೀದರ್: ‘ಇಂದಿನಿಂದ (ಶನಿವಾರ) ಡಿ.24ರ ವರೆಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು, ಐದು ವರ್ಷದೊಳಗಿನ ಜಿಲ್ಲೆಯ ಒಟ್ಟು 2.13 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ’ ಎಂದು ನೋಡಲ್ ಅಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ ಹೇಳಿದರು.
ನಗರದಲ್ಲಿ ಶನಿವಾರ ಪಲ್ಸ್ ಪೋಲಿಯೊ ವಾಹನಗಳ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪೋಲಿಯೊದಿಂದ ಬಿಟ್ಟು ಹೋದ ಒಟ್ಟು 3.35 ಲಕ್ಷ ಮನೆಗಳ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಇದಕ್ಕಾಗಿ ಮನೆ ಮನೆಗೆ ಭೇಟಿ ಕೊಟ್ಟು ಲಸಿಕೆ ಹಾಕಿಸಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ಮಾತನಾಡಿ, ಪಲ್ಸ್ ಪೋಲಿ ಯೊಗಾಗಿ ಒಟ್ಟು 1,077 ತಂಡಗಳನ್ನು ರಚಿಸಲಾಗಿದೆ. ಪೋಲಿಯೊ ಬೂತ್‌ನಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬಹುದು. ಲಸಿಕೆಯಿಂದ ಯಾರೂ ತಪ್ಪಿಸಿಕೊಳ್ಳಬಾರದು ಎಂದು ಹೇಳಿದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಶಿವಶಂಕರ ಭತಮುರ್ಗೆ ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಾಲ್ಕು ದಿನಗಳ ಕಾರ್ಯಕ್ರಮವಾಗಿದೆ. ಸಮೀಪದ ಬೂತ್‌ಗಳಲ್ಲಿ ತಪ್ಪದೇ ಲಸಿಕೆ ಹಾಕಿಸಿ ಮಕ್ಕಳು ಅಂಗವೈಕಲ್ಯಕ್ಕೆ ಒಳಗಾಗದಂತೆ ತಡೆಯಬೇಕು ಎಂದರು.
ಡಾ. ರಾಜಶೇಖರ ಪಾಟೀಲ, ಡಾ. ಶಂಕ್ರೆಪ್ಪ ಬೊಮ್ಮಾ, ಡಾ. ಅನೀಲ ಚಿಂತಾಮಣಿ, ಡಾ. ದಿಲೀಪ್ ಡೋಂಗ್ರೆ, ಡಾ. ಕಿರಣ ಪಾಟೀಲ, ಡಾ. ಸಂಗರೆಡ್ಡಿ, ಉಮೇಶ ಬಿರಾದಾರ, ಲೋಕೇಶ ಸಲಗರ್, ಶಿವಶಂಕರ ಬೇಮಳಗಿ, ಗುರುನಾಥ ಕವಳೆ, ದೇವಿದಾಸ, ಸಿಬ್ಬಂದಿ ಇದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಭಾನುವಾರ (ಡಿ.21) ಬೆಳಿಗ್ಗೆ 8ಕ್ಕೆ ಬೀದರ್‌ನ ಗಾವಾನ್ ಚೌಕ್‌ನಲ್ಲಿರುವ ‘ಒಯಸ್ಟರ್ ಸ್ಕೂಲ್ ಆಫ್ ಎಕ್ಸ್‌ಲೆನ್ಸ್’ನಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾಗಿದೆ.