ಬೀದರ್: ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೀಡಾದ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದಿಂದ ಪ್ರವಾಸ ಆರಂಭಿಸಿದರು. ಮಳೆಗೆ ಭಾಗಶಃ ಕುಸಿದು ಬಿದ್ದಿರುವ ಗ್ರಾಮದ ನರಸಪ್ಪ ಎಸ್.ಕೆ. ಹಾಗೂ ಶಫಿ ಅವರ ಮನೆಗಳನ್ನು ಪರಿಶೀಲಿಸಿದರು. ಆನಂತರ ಊರ ಹೊರವಲಯದಲ್ಲಿ ಹಳ್ಳಕ್ಕೆ ಹೊಂದಿಕೊಂಡಿರುವ ವಿಠ್ಠಲ ಗಬಾರೆ ಸೇರಿದಂತೆ ಇತರೆ ರೈತರ ಹೊಲಗಳಿಗೆ ಭೇಟಿ ಕೊಟ್ಟರು. ಹಳ್ಳದ ನೀರು ಹೊಲಗಳಲ್ಲಿ ಉಕ್ಕಿ ಹರಿದ ಪರಿಣಾಮ ಹೆಸರು, ಉದ್ದು ಹಾಳಾಗಿರುವುದನ್ನು ನೋಡಿ, ಸ್ಥಳೀಯ ರೈತರಿಂದ ಮಾಹಿತಿ ಪಡೆದರು.
ಇದಾದ ನಂತರ ಅವರು ಗಾದಗಿ ಗ್ರಾಮಕ್ಕೆ ಭೇಟಿ ಕೊಟ್ಟು, ಗ್ರಾಮದ ಅಭಿಷೇಕ್ ಗುಣವಂತ ಅವರ ಹಾನಿಗೀಡಾದ ಮನೆ ವೀಕ್ಷಿಸಿ, ಮಾಹಿತಿ ಪಡೆದು, ಸರ್ಕಾರದಿಂದ ಪರಿಹಾರ ಕೊಡಿಸುವ ಆಶ್ವಾಸನೆ ನೀಡಿದರು. ಆನಂತರ ಅವರು ಹಮೀಲಾಪೂರ, ಜನವಾಡ, ಯರನಳ್ಳಿ ಹಾಗೂ ಸಾಂಗ್ವಿ ಗ್ರಾಮಗಳಿಗೆ ಭೇಟಿ ಕೊಟ್ಟು, ಹಾಳಾಗಿರುವ ಉದ್ದು, ಹೆಸರು ಬೆಳೆಗಳ ಹೊಲಗಳನ್ನು ನೋಡಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಇಡೀ ದೇಶದಾದ್ಯಂತ ಈ ಸಲ ಹೆಚ್ಚಿನ ಮಳೆಯಾಗುತ್ತಿದೆ. ಅದೇ ರೀತಿ ಬೀದರ್ ಜಿಲ್ಲೆಯಲ್ಲೂ ಮಳೆಯಾಗಿದೆ. ವಾಡಿಕೆಗಿಂತ ಎರಡ್ಮೂರು ಪಟ್ಟು ಅಧಿಕ ಮಳೆಯಾಗಿರುವುದರಿಂದ ನನ್ನ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಹಲವು ಮನೆಗಳು ಹಾನಿಗೀಡಾಗಿವೆ. ಉದ್ದು, ಹೆಸರು ಸಂಪೂರ್ಣ ಹಾಳಾಗಿದೆ. ತೊಗರಿ ಶೇ 50ರಷ್ಟು ಹಾಳಾಗಿ ಹೋಗಿದೆ. ರಸ್ತೆ, ವಿದ್ಯುತ್ ಕಂಬುಗಳು ನೆಲಕ್ಕುರುಳಿವೆ ಎಂದು ತಿಳಿಸಿದರು.
ಕಂದಾಯ, ಕೃಷಿ, ತೋಟಗಾರಿಕೆ, ಜೆಸ್ಕಾಂ ಸೇರಿದಂತೆ ಹತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಈ ಪ್ರವಾಸ ಕೈಗೊಂಡಿದ್ದೇನೆ. ಒಂದು ವಾರದ ಒಳಗೆ ಎಲ್ಲೆಲ್ಲಿ, ಏನೇನು ಮತ್ತು ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದರ ವರದಿ ಕೊಡಬೇಕೆಂದು ಸೂಚಿಸಿದ್ದೇನೆ. ಆನಂತರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರೊಂದಿಗೆ ಚರ್ಚಿಸಿ ಪರಿಹಾರ ವಿತರಣೆಗೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮನೆ ಹಾನಿಗೀಡಾದವರಿಗೆ ತಕ್ಷಣವೇ ಸ್ಥಳದಲ್ಲೇ ₹7 ಸಾವಿರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಮೀಕ್ಷಾ ಕಾರ್ಯ ಪೂರ್ಣಗೊಂಡ ನಂತರ ಬೆಳೆ ಹಾನಿಯಾದವರಿಗೆ ಎಷ್ಟು ಪರಿಹಾರ ನೀಡಬೇಕೆನ್ನುವುದರ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ಬೀದರ್ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತು ಮುಖ್ಯಮಂತ್ರಿ, ಕೃಷಿ ಸಚಿವರು, ತೋಟಗಾರಿಕೆ ಸಚಿವರು ಹಾಗೂ ಕಂದಾಯ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಹಾನಿಯ ಮಾಹಿತಿ ಬಂದ ನಂತರ ಪುನಃ ಅವರ ಗಮನಕ್ಕೆ ತಂದು ಪರಿಹಾರ ವಿತರಣೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಬೀದರ್ ಉಪವಿಭಾಗಾಧಿಕಾರಿ ಮುಹಮ್ಮದ್ ಶಕೀಲ್, ತಹಶೀಲ್ದಾರ್ ರವೀಂದ್ರ ದಾಮಾ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ ಮತ್ತಿತರರು ಇದ್ದರು.
‘ಮಳೆಗಾಲ ಮುಗಿದ ನಂತರ ರಸ್ತೆ ದುರಸ್ತಿ’
‘ಮಳೆಗೆ ಬೀದರ್ ನಗರದಲ್ಲಿ ರಸ್ತೆಗಳು ಹಾಳಾಗಿರುವುದು ಗಮನಕ್ಕೆ ಬಂದಿದೆ. ಮಳೆಗಾಲ ಮುಗಿದ ನಂತರ ಅವುಗಳನ್ನು ಸರಿಪಡಿಸಲಾಗುವುದು. ತೀರ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಲು ಸೂಚಿಸಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ₹200 ಕೋಟಿ ನೀಡಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ’ ಎಂದು ಸಚಿವ ರಹೀಂ ಖಾನ್ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಇತರೆ ಮಹಾನಗರಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಬರುತ್ತದೆ. ಹೀಗಿದ್ದರೂ ಅಲ್ಲಿ ಮಳೆಗಾಲದಲ್ಲಿ ನಾನಾ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಬೀದರ್ ಸಣ್ಣ ನಗರ. ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಎಲ್ಲೆಲ್ಲಿ ಎಷ್ಟು ಮನೆಗಳಿಗೆ ಹಾನಿ
ಗ್ರಾಮ ಹೆಸರು; ಹಾನಿ
ಚಿಲ್ಲರ್ಗಿ; 07
ಗಾದಗಿ; 05
ಹಮಿಲಾಪೂರ; 06
ಯರನಳ್ಳಿ; 02
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.