ಬೀದರ್‌ನಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಜಿಟಿಜಿಟಿ ಮಳೆ, ಜನಜೀವನ ಅಸ್ತವ್ಯಸ್ತ
ಬೀದರ್: ಬಿಟ್ಟೂ ಬಿಡದೇ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕಳೆದ ಐದು ದಿನಗಳಿಂದ ಹಗಲು–ರಾತ್ರಿಯೆನ್ನದೆ ಒಂದೇ ಸಮನೆ ಜಿಟಿಜಿಟಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಶಾಲಾ–ಕಾಲೇಜು, ಕಚೇರಿ ಸೇರಿದಂತೆ ದೈನಂದಿನ ಕೆಲಸಗಳಿಗೆ ಹೋಗುವವರು ತೀವ್ರ ಪರದಾಟ ನಡೆಸಿದರು.
ನಗರದ ಹೈದರಾಬಾದ್ ರಸ್ತೆಯ ಎಪಿಎಂಸಿ, ಗಾಂಧಿ ಗಂಜ್ ಮಾರುಕಟ್ಟೆಯ ಮೇಲೂ ಮಳೆಯ ಪರಿಣಾಮ ಉಂಟಾಗಿದ್ದು, ವ್ಯಾಪಾರ ವಹಿವಾಟು ಹೇಳಿಕೊಳ್ಳುವಂತಹ ರೀತಿಯಲ್ಲಿ ಇರಲಿಲ್ಲ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನರ ಓಡಾಟ ಕಂಡು ಬರಲಿಲ್ಲ.
ಜಿಲ್ಲೆಯ ಬಸವಕಲ್ಯಾಣ, ಬೀದರ್, ಭಾಲ್ಕಿ, ಔರಾದ್, ಹುಮನಾಬಾದ್, ಚಿಟಗುಪ್ಪ, ಕಮಲನಗರ ಹಾಗೂ ಹುಲಸೂರ ತಾಲ್ಲೂಕಿನಾದ್ಯಂತ ಮಳೆಯಾಗಿದೆ. ಸತತ ಮಳೆಗೆ ಔರಾದ್ ತಾಲ್ಲೂಕಿನಲ್ಲಿ ಆರು ಮನೆಗಳಿಗೆ ಹಾನಿ ಉಂಟಾಗಿದೆ.
ವರ್ಷಧಾರೆಗೆ ಜಿಲ್ಲೆಯ ಬಹುತೇಕ ಕೆರೆ, ಕಟ್ಟೆಗಳು, ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಜಿಲ್ಲೆಯ ಕಾರಂಜಾ ಜಲಾಶಯಕ್ಕೂ ನೀರು ಹರಿದು ಬರುತ್ತಿದೆ. ಬೀದರ್ ತಾಲ್ಲೂಕಿನ ಬಗದಲ್ ಸಮೀಪದ ಗದ್ದೆಗಳಲ್ಲಿ ನೀರು ಸಂಗ್ರಹಗೊಂಡಿದ್ದು, ರೈತರ ಚಿಂತೆ ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.