ADVERTISEMENT

ಗ್ರಾಹಕ ಸೇವಾ ಕೇಂದ್ರದ ಎದುರು ಜನಜಂಗುಳಿ: ಲಾಠಿ ಹಿಡಿದು ರಸ್ತೆಗಿಳಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 15:15 IST
Last Updated 7 ಏಪ್ರಿಲ್ 2020, 15:15 IST
ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಹಿಳೆಯರಿಗೆ ಸೂಚಿಸಿದ ಪೊಲೀಸರು
ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಹಿಳೆಯರಿಗೆ ಸೂಚಿಸಿದ ಪೊಲೀಸರು   

ಬೀದರ್: ಪ್ರಧಾನಮಂತ್ರಿ ಜನಧನ್‌ ಯೋಜನೆಯ ಖಾತೆ ಹೊಂದಿರುವ ಮಹಿಳೆಯರು ಹಣ ಪಡೆದುಕೊಳ್ಳಲು ಇಲ್ಲಿಯ ಗ್ರಾಹಕ ಸೇವಾ ಕೇಂದ್ರಗಳ ಮುಂದೆ ಮುಗಿ ಬೀಳುತ್ತಿರುವುದರಿಂದ ಹಿರಿಯ ಪೊಲೀಸ್‌ ಅಧಿಕಾರಿಗಳು ಮಂಗಳವಾರ ಲಾಠಿ ಹಿಡಿದು ರಸ್ತೆಗೆ ಇಳಿಯಬೇಕಾಯಿತು.

ಎರಡು ವಾರಗಳಿಂದ ಜನರಿಗೆ ಉದ್ಯೋಗ ಇಲ್ಲ. ಹೀಗಾಗಿ ಮಹಿಳೆಯರು ನಿಷೇಧಾಜ್ಞೆಯನ್ನು ಲೆಕ್ಕಿಸದೆ ಹಣ ಪಡೆಯಲು ಮಕ್ಕಳೊಂದಿಗೆ ಗ್ರಾಹಕ ಸೇವಾ ಕೇಂದ್ರಗಳ ಮುಂದೆ ಬಂದು ಗುಂಪು ಗುಂಪಾಗಿ ಕುಳಿತುಕೊಳ್ಳುತ್ತಿದ್ದಾರೆ. ಎರಡು ದಿನ ಪೊಲೀಸರೂ ಗಂಭೀರವಾಗಿರಲಿಲ್ಲ.

ಜಿಲ್ಲೆಯ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓಲ್ಡ್‌ಸಿಟಿಯಲ್ಲೂ ಲಾಕ್‌ಡೌನ್‌ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ. ಆದರೆ, ಮೂರು ದಿನಗಳಿಂದ ಎಸ್‌ಬಿಐ ಗ್ರಾಹಕ ಸೇವಾ ಕೇಂದ್ರದ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ನಿಂತುಕೊಂಡಿರುವ ಚಿತ್ರಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದರೂ ಪೊಲೀಸ್‌ ಅಧಿಕಾರಿಗಳು ಕ್ಯಾರೇ ಅಂದಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಅವರೇ ಪೊಲೀಸರಿಗೆ ಸೂಚನೆ ನೀಡಬೇಕಾಯಿತು.

ಪೊಲೀಸರು ನಗರಸಭೆಯ ಕಾಂಪ್ಲೆಕ್ಸ್‌ಗಳಲ್ಲಿರುವ ಎರಡು ಗ್ರಾಹಕ ಸೇವಾ ಕೇಂದ್ರ ಹಾಗೂ ಜನವಾಡ ರಸ್ತೆಯಲ್ಲಿರುವ ಒಂದು ಕೇಂದ್ರಕ್ಕೆ ತೆರಳಿ ಗ್ರಾಹಕರಿಗೆ ಎಚ್ಚರಿಕೆ ನೀಡಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದರು. ಕೆಲವರಿಗೆ ಚೀಟಿಕೊಟ್ಟು ಕಳಿಸುವ ವ್ಯವಸ್ಥೆ ಮಾಡಿಸಿದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಡಿವೈಎಸ್‌ಪಿ ಬಸವೇಶ್ವರ ಹೀರಾ, ನ್ಯೂಟೌನ್‌ ಠಾಣೆಯ ಗುರು ಹಾಗೂ ಸಿಬ್ಬಂದಿ ಲಾಠಿ ಹಿಡಿದು ರಸ್ತೆಗಿಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.