ಬೀದರ್: ಕುರಿಗಾಹಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿ ಆ. 19ರಂದು ‘ಕುರಿಗಾಹಿಗಳ ನಡೆ, ವಿಧಾನಸೌಧದ ಕಡೆ’ ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲ ಎಂ.ಪಿ. ಗಾರಂಪಳ್ಳಿ ತಿಳಿಸಿದರು.
ರಾಜ್ಯದ ಮೂಲೆಮೂಲೆಗಳಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಆದಿವಾಸಿ, ಅಲೆಮಾರಿ, ಸಂಚಾರಿ ಬುಡಕಟ್ಟು, ಅಸಂಘಟಿತ ಮೂಲನಿವಾಸಿ ಕುರಿಗಾಹಿಗಳ ಹೋರಾಟ ಸಮಿತಿ ಹಾಗೂ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿ ಸಹಯೋಗದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮುಂಗಾರು ಅಧಿವೇಶನ ಮುಗಿಯುವುದರೊಳಗೆ ಮಸೂದೆ ಮಂಡಿಸಿ ಕಾಯ್ದೆಯಾಗಿ ಜಾರಿಗೆ ತರಬೇಕು. ಶೋಷಿತರು, ದಮನಿತರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಉಗಲವಾಟ್ ಗ್ರಾಮದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಹಾಗೂ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕುರಿಗಾಹಿ ಪ್ರಭು ಮೇತ್ರೆ ಇವರನ್ನು ಕುರಿಗಳ್ಳರು ಕೊಲೆ ಮಾಡಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನಲ್ಲಿ ಲಕ್ಷ್ಮೀ ಕಳ್ಳಿಮನಿ ಎಂಬ ಕುರಿಗಾಹಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇದನ್ನು ತಡೆಯಬೇಕಾದರೆ ಕಾಯ್ದೆ ರೂಪಿಸಿ, ಜಾರಿಗೆ ಅತ್ಯಗತ್ಯ ಎಂದರು.
ಗೊಂಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ತುಕಾರಾಮ ಚಿಮಕೋಡ್, ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿ ಪದಾಧಿಕಾರಿಗಳಾದ ರವೀಂದ್ರ ಬಳತ್, ಗಿರಿಮಲ್ಲಪ್ಪ ಹಸರಗುಂಡಗಿ, ಈರಪ್ಪ ಬೆಳಮಗಿ, ಮಲ್ಲಿಕಾರ್ಜುನ ಔರಾಪುರ, ಗುರುನಾಥ ಪೂಜಾರಿ, ಆನಂದ ಬನ್ನಳ್ಳಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.