ADVERTISEMENT

ಬೀದರ್ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜನವಾಡಕರ್

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 16:49 IST
Last Updated 6 ಫೆಬ್ರುವರಿ 2021, 16:49 IST
ಎಸ್.ಎಂ. ಜನವಾಡಕರ್
ಎಸ್.ಎಂ. ಜನವಾಡಕರ್   

ಬೀದರ್: ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಎಸ್.ಎಂ. ಜನವಾಡಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸರ್ವ ಸಮ್ಮತದಿಂದ ಅವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಘಟಕದ ಉಪಾಧ್ಯಕ್ಷರಾದ ವಿಜಯಕುಮಾರ ಗೌರೆ, ಜಯದೇವಿ ಯದಲಾಪುರೆ, ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ, ಕೋಶಾಧ್ಯಕ್ಷ ಟಿ.ಎಂ. ಮಚ್ಚೆ, ಗಡಿ ಪ್ರತಿನಿಧಿ ಶಿವಕುಮಾರ ಕಟ್ಟೆ, ಮಹಿಳಾ ಪ್ರತಿನಿಧಿ ಕಸ್ತೂರಿ ಪಟಪಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಮಕ್ಕಳ ಘಟಕದ ಅಧ್ಯಕ್ಷೆ ರಜಿಯಾ ಬಳಬಟ್ಟಿ, ಪ್ರಮುಖರಾದ ಎಸ್.ವಿ. ಕಲ್ಮಠ, ಪಾಂಡುರಂಗ ಬೆಲ್ದಾರ್, ಡಾ. ರಾಜಕುಮಾರ ಅಲ್ಲೂರೆ, ಬಾಬುರಾವ್ ದಾನಿ, ಚನ್ನಬಸವ ಹೇಡೆ, ಯೋಗೀಶ ಮಠದ, ಜಗನ್ನಾಥ ಕಮಲಾಪುರೆ, ವೀರಶೆಟ್ಟಿ ಚನಶೆಟ್ಟಿ, ಸಿದ್ಧಾರೂಢ ಭಾಲ್ಕೆ ಇದ್ದರು.

ADVERTISEMENT

ವಿವಿಧ ಹುದ್ದೆಗಳಲ್ಲಿ ಜನವಾಡಕರ್ ಸೇವೆ: ಎಂ.ಎ., ಬಿ.ಇಡಿ ಪದವೀಧರರಾದ 71 ವರ್ಷದ ಎಸ್.ಎಂ. ಜನವಾಡಕರ್ ಅವರು ವೃತ್ತಿ ಜೀವನ ಆರಂಭಿಸಿದ್ದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ. ಪ್ರೌಢಶಾಲಾ ಶಿಕ್ಷಕ, ಡಯಟ್ ಪ್ರಶಿಕ್ಷಕ, ಸಹಾಯಕ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದ್ದು.

ಸೇವಾ ನಿವೃತ್ತಿಯ ನಂತರ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದಾರೆ. ಕನ್ನಡತ್ವ, ಬಸವ ತತ್ವ, ಬುದ್ಧ ತತ್ವ, ಸಾಹಿತ್ಯ, ಸಮಾಜೋಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶೀಲ ತರಂಗ, ಪ್ರಜ್ಞಾ ತರಂಗ, ಕರುಣ ತರಂಗ, ಧಮ್ಮ ಚರಿತ ಕಾವ್ಯ, ತಥಾಗತ ಗಾಥೆಗಳ್ ಕವನ ಸಂಕಲನ, ಬಣ್ಣದ ಬದುಕು ಕಥಾ ಸಂಕಲನ, ಹಸಿರು ಕ್ರಾಂತಿ, ಬುದ್ಧ ಗೆದ್ದ ಮಾರನ ಯುದ್ಧ ನಾಟಕ, ಮಾಸಿದ ಹಾಸಿಗೆ, ಕಾದ ಕಂಬನಿ, ನಂಟು ಬಿಡದೆ ಅಂಟಿಕೊಂಡವರು ಕಾದಂಬರಿ, ಹಿಮಸಾಗರ, ಧರಿನಾಡಿನಿಂದ ಧಮ್ಮ ನಾಡಿಗೆ ಪ್ರವಾಸ ಕಥನ, ಗಾಜಿನ ಬಳೆ ಚೂರು, ಕರುಳಿನ ಕತ್ತರಿ, ಕವಲು ದಾರಿಯ ಪಯಣ ವೈಚಾರಿಕ ಪುಸ್ತಕ, ಧಮ್ಮ ಸುಳುವಿನ ಧರಿನಾಡು ಸಂಶೋಧನ, ಕಲ್ಯಾಣ ಕಂಡ ಕಲ್ಯಾಣ ವಚನ ವ್ಯಾಖ್ಯಾನ, ಬೀದರ್ ಜನಪದ ಸಿರಿ, ಬೆಡಗಿನ ಬೀದರ್ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಅವರ ಚಿಂತನೆಗಳು ದೂರದರ್ಶನದ ಬಾನುಲಿ ಕೇಂದ್ರಗಳಿಂದ ಪ್ರಸಾರವಾಗಿವೆ. ಧ್ವನಿಸುರುಳಿ ಕೂಡ ಬಿಡುಗಡೆಯಾಗಿದೆ.

ಬೀದರ್ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ಗೌರವಕ್ಕೆ ಪಾತ್ರರಾಗಿದ್ದಾರೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಜಿಲ್ಲಾ ಗಣರಾಜೋತ್ಸವ ಪ್ರಶಸ್ತಿ, ಸಿದ್ಧಾರ್ಥ ಸಾಹಿತ್ಯ ಪ್ರಶಸ್ತಿ, ಉರಿಲಿಂಗ ಪೆದ್ದಿ ಪ್ರಶಸ್ತಿ, ವಚನ ಸಾಹಿತ್ಯ ಪ್ರಶಸ್ತಿ, ಕನ್ನಡರತ್ನ ಪ್ರಶಸ್ತಿ, ಪ್ರಬುದ್ಧ ಸಾಹಿತ್ಯ ಪ್ರಶಸ್ತಿ, ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಸಾಹಿತ್ಯರತ್ನ ಪ್ರಶಸ್ತಿ, ಭಗವಾನ ಬುದ್ಧ ರಾಷ್ಟ್ರೀಯ ಫೆಲೊಶಿಪ್ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.