ADVERTISEMENT

ಬೀದರ್‌ ಜಿಲ್ಲೆಗೆ ಸೋಯಾ ಸಂಸ್ಕರಣಾ ಘಟಕ ಮಂಜೂರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿಶೇಷ ಆಸ್ಥೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ನವೆಂಬರ್ 2025, 6:54 IST
Last Updated 7 ನವೆಂಬರ್ 2025, 6:54 IST
<div class="paragraphs"><p>ಬೀದರ್‌ನ ಗಾಂಧಿ ಗಂಜ್‌ನಲ್ಲಿ ರೈತರು ಮಾರಾಟಕ್ಕೆ ತಂದಿರುವ ಸೋಯಾಬೀನ್‌ ಕಾಳು ಕೊಂಪೆ ಹಾಕಿರುವುದು</p></div>

ಬೀದರ್‌ನ ಗಾಂಧಿ ಗಂಜ್‌ನಲ್ಲಿ ರೈತರು ಮಾರಾಟಕ್ಕೆ ತಂದಿರುವ ಸೋಯಾಬೀನ್‌ ಕಾಳು ಕೊಂಪೆ ಹಾಕಿರುವುದು

   

ಬೀದರ್‌: ಬೀದರ್‌ ಜಿಲ್ಲೆಗೆ ಸೋಯಾಬೀನ್‌ ಸಂಸ್ಕರಣಾ ಘಟಕ ಮಂಜೂರಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿಶೇಷ ಆಸ್ಥೆ ವಹಿಸಿ ಕರ್ನಾಟಕದ ತುತ್ತ ತುದಿಯಲ್ಲಿರುವ ಬೀದರ್‌ ಜಿಲ್ಲೆಗೆ ಈ ಕೊಡುಗೆ ನೀಡಿದ್ದಾರೆ.

ADVERTISEMENT

ಇಡೀ ರಾಜ್ಯದಲ್ಲೇ ಬೀದರ್‌ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೋಯಾ ಅವರೆ ಬೆಳೆಯಲಾಗುತ್ತದೆ. ಇದರಿಂದ ಬಹಳಷ್ಟು ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆದರೆ, ಸೋಯಾ ಸಂಸ್ಕರಣಾ ಘಟಕ ಇರಲಿಲ್ಲ. ಇದರಿಂದಾಗಿ ರೈತರು ಬೆಳೆದ ಸೋಯಾ ಕಾಳುಗಳನ್ನು ಮಾರುಕಟ್ಟೆಯಲ್ಲಿ ತಂದು ಮಾರಾಟ ಮಾಡುತ್ತಿದ್ದರು. ಮಧ್ಯವರ್ತಿಗಳ ಮೂಲಕ ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಖಾಸಗಿ ಸಂಸ್ಕರಣಾ ಘಟಕಗಳಿಗೆ ಕಳಿಸಿಕೊಡಲಾಗುತ್ತಿತ್ತು. ಸಚಿವೆ ನಿರ್ಮಲಾ ಅವರು ತೆಗೆದುಕೊಂಡಿರುವ ಕ್ರಮದಿಂದ ಜಿಲ್ಲೆಯ ರೈತರಿಗೆ ನೆರವಾಗಲಿದೆ.

₹50 ಲಕ್ಷ ಮಂಜೂರು: ನಿರ್ಮಲಾ ಸೀತಾರಾಮನ್‌ ಅವರು ಸೋಯಾ ಸಂಸ್ಕರಣಾ ಘಟಕ ಮಂಜೂರು ಮಾಡಿ ಸುಮ್ಮನಾಗಿಲ್ಲ. ಅದರೊಂದಿಗೆ ಅವರ ಸಂಸದರ ನಿಧಿಯಿಂದ ₹50 ಲಕ್ಷ ಅನುದಾನ ಕೂಡ ನೀಡಿದ್ದಾರೆ. ನಬಾರ್ಡ್‌ ಸೇರಿದಂತೆ ಇತರೆ ಸಂಸ್ಥೆಗಳ ಅನುದಾನದೊಂದಿಗೆ ಸಂಸ್ಕರಣಾ ಘಟಕವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ, ಸ್ಥಳೀಯ ಸೋಯಾ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಯೋಜನೆ ರೂಪಿಸಿದ್ದಾರೆ.

ಈಗಾಗಲೇ ಜಿಲ್ಲೆಯ ಕಮಲನಗರ ತಾಲ್ಲೂಕನ್ನು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಗುರುತಿಸಲಾಗಿದೆ. ಕೆಲ ತಿಂಗಳುಗಳ ಹಿಂದೆಯೇ ನಿರ್ಮಲಾ ಸೀತಾರಾಮನ್‌ ಅವರ ಆಪ್ತ ಕಾರ್ಯದರ್ಶಿ ಅನಿರುದ್ಧ್‌ ಶ್ರವಣ್‌ ಅವರು ಬೀದರ್‌ ಜಿಲ್ಲೆಗೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ಜಿಲ್ಲಾಧಿಕಾರಿಗಳೊಂದಿಗೆ ಈ ವಿಷಯವಾಗಿ ಚರ್ಚಿಸಿ, ವರದಿ ಸಲ್ಲಿಸಿದ್ದರು. ಆ ವರದಿ ಆಧಾರದ ಮೇಲೆ ಸೋಯಾ ಸಂಸ್ಕರಣಾ ಘಟಕವನ್ನು ಜಿಲ್ಲೆಗೆ ಮಂಜೂರು ಮಾಡಲಾಗಿದೆ.

ದೇಶದ ಆಯಾ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುವ ಬೆಳೆಗಳನ್ನು ಗುರುತಿಸಿ, ಅದಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಘಟಕ ನಿರ್ಮಿಸಿ, ಮಾರುಕಟ್ಟೆ ಕಲ್ಪಿಸಲು ನಿರ್ಮಲಾ ಸೀತಾರಾಮನ್‌ ಅವರು ಯೋಜನೆ ರೂಪಿಸಿದ್ದಾರೆ. ಅದರ ಭಾಗವಾಗಿ ಬೀದರ್‌ನಲ್ಲಿ ಸೋಯಾ ಅವರೆ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಚಿವರ ಈ ತೀರ್ಮಾನವನ್ನು ಜಿಲ್ಲೆಯ ಸೋಯಾ ಅವರೆ ಬೆಳೆಗಾರರು ಸ್ವಾಗತಿಸಿದ್ದಾರೆ.

–––

ಬೀದರ್‌ ಜಿಲ್ಲೆಯ ಕಮಲನಗರ ತಾಲ್ಲೂಕಿನಲ್ಲಿ ಸೋಯಾಬೀನ್‌ ಸಂಸ್ಕರಣ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಅದಕ್ಕೆ ಚಾಲನೆ ಕೊಡುವ ಕೆಲಸವಾಗಲಿದೆ

–ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.