ADVERTISEMENT

ಬೀದರ್‌: ಜಲಾಶಯಗಳಲ್ಲಿ ಕುಸಿಯುತ್ತಿರುವ ನೀರಿನ ಪ್ರಮಾಣ

ಜಿಲ್ಲೆಯ ನದಿ ದಂಡೆ ಗ್ರಾಮಗಳಿಗೆ ಕಾರಂಜಾ ಆಸರೆ

ಚಂದ್ರಕಾಂತ ಮಸಾನಿ
Published 11 ಮೇ 2022, 19:30 IST
Last Updated 11 ಮೇ 2022, 19:30 IST
ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯ
ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯ   

ಬೀದರ್: ಪ್ರಖರ ಬಿಸಿಲು ಜಿಲ್ಲೆಯ ಜಲಾಶಯಗಳ ಮೇಲೂ ಪರಿಣಾಮ ಬೀರಿದೆ. ಕಳೆದ ವರ್ಷ ಮುಂಗಾರು ಮಳೆ ಹಾಗೂ ಅಕಾಲಿಕ ಮಳೆಗೆ ತುಂಬಿ ಹರಿದ ಬಹುತೇಕ ಜಲಾಶಯಗಳಲ್ಲಿ ಈಗ ನಿಧಾನವಾಗಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

ನದಿ ದಂಡೆ ಗ್ರಾಮಗಳು ನದಿ ನೀರನ್ನೇ ಅವಲಂಬಿಸಿವೆ. ಹೀಗಾಗಿ ಜಲಾಶಯದಿಂದ ನೀರು ಹರಿದು ಬಿಡಲಾಗುತ್ತಿದೆ. ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿಯುತ್ತಿಲ್ಲ. ಬಿಸಿಲು ಹೆಚ್ಚಾಗುತ್ತಿರುವುದರಿಂದ ಹಾಗೂ ಜಲಾಶಯಗಳಲ್ಲಿ ಒಳಹರಿವು ಸಹ ಕಡಿಮೆಯಾದ ಕಾರಣ ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ.

ಮುಲ್ಲಾಮಾರಿ ಜಲಾಶಯದಲ್ಲಿ 0.548 ಟಿಎಂಸಿ ಅಡಿ ಪೈಕಿ 0.455 ಟಿಎಂಸಿ ಅಡಿ ಅಂದರೆ ಶೇಕಡ 71.69ರಷ್ಟು ನೀರು ಸಂಗ್ರಹವಿದೆ. ಚುಳುಕಿನಾಲಾದಲ್ಲಿ 0.938 ಟಿಎಂಸಿ ಅಡಿ ಪೈಕಿ 0.727 ಟಿಎಂಸಿ ಅಡಿ ಅಂದರೆ ಶೇಕಡ 83.41ರಷ್ಟು ನೀರಿನ ಸಂಗ್ರಹ ಇದೆ.

ADVERTISEMENT

ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದಲ್ಲಿ 5.037 ಟಿಎಂಸಿ ಅಡಿ ಅಂದರೆ ಶೇಕಡ 70.37ರಷ್ಟು ನೀರು ಸಂಗ್ರಹವಿದೆ. ಜಲಾಶಯದಿಂದ 55 ಕ್ಯೂಸೆಕ್‌ ನೀರು ಹರಿಯ ಬಿಡಲಾಗುತ್ತಿದೆ.

2021ರ ಸೆಪ್ಟೆಂಬರ್‌ನಲ್ಲಿ ಜಿಲ್ಲೆಯ ಎಲ್ಲ ಜಲಾಶಯಗಳು ಭರ್ತಿಯಾಗಿದ್ದವು. ಭಾಲ್ಕಿ ತಾಲ್ಲೂಕಿನ ಕಾರಂಜಾ ಜಲಾಶಯ, ಬಸವಕಲ್ಯಾಣ ತಾಲ್ಲೂಕಿನ ಚುಳುಕಿನಾಲಾ, ಅಪ್ಪರ್‌ ಮುಲ್ಲಾಮಾರಿ ಜಲಾಶಯಗಳಿಂದ ನೀರು ಹೊರಕ್ಕೆ ಬಿಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ ತೆಲಂಗಾಣದಲ್ಲೂ ಧಾರಾಕಾರ ಮಳೆ ಸುರಿದ ಕಾರಣ ತೆಲಂಗಾಣದ ಕೊತ್ತೂರಿನ ಚಿಕ್ಕ ಜಲಾಶಯದಿಂದ 1,500 ಕ್ಯೂಸೆಕ್ ನೀರು ಬಿಡಲಾಗಿತ್ತು. ನಂತರ ಕಾರಂಜಾದ ನಾಲ್ಕು ಕ್ರಸ್ಟ್‌ ಗೇಟ್‌ಗಳನ್ನು ತೆರೆದು 8,500 ಕ್ಯೂಸೆಕ್‌ ನೀರು ಹರಿಯ ಬಿಡಲಾಗಿತ್ತು’ ಎಂದು ಕಾರಂಜಾ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್‌ ರವಿಕಿರಣ ಹೇಳುತ್ತಾರೆ.

ಭಾಲ್ಕಿ, ಔರಾದ್‌, ಕಮಲನಗರ ಹಾಗೂ ಬೀದರ್‌ ತಾಲ್ಲೂಕಿನ ನದಿ ದಂಡೆಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡ ನಂತರ ಕಾರಂಜಾ ಜಲಾಶಯದಿಂದ ಏಪ್ರಿಲ್‌ ಎರಡನೇ ವಾರದಲ್ಲಿ ನೀರು ಹರಿಯ ಬಿಡಲಾಗಿತ್ತು ಈಗಲೂ ಅಲ್ಪ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ.

ಪ್ರಸಕ್ತ ವರ್ಷ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗಿಲ್ಲ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಈ ಬಾರಿ ಮುಂಗಾರು ಬೇಗ ಆರಂಭವಾಗಲಿದೆ. ಸದ್ಯ ಜಲಾಶಯಗಳಲ್ಲಿ ನದಿ ದಂಡೆ ಗ್ರಾಮಗಳಿಗೆ ಆರು ತಿಂಗಳು ಪೂರೈಸುವಷ್ಟು ನೀರು ಇದೆ. ಕಲಬುರಗಿ ಪ್ರಾದೇಶಿಕ ಆಯುಕ್ತರ ನಿರ್ದೇಶನದ ಮೇರೆಗೆ ಏಪ್ರಿಲ್‌ನಲ್ಲಿ ಜಲಾಶಯದಿಂದ ನೀರು ಹರಿಸಲಾಗಿದೆ ಎಂದು ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.