ADVERTISEMENT

ಹೆಸರು, ಉದ್ದು ಬಿತ್ತಲು ಇದು ಸಕಾಲ

ರೈತರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 13:48 IST
Last Updated 11 ಜೂನ್ 2020, 13:48 IST
ಬೀದರ್‌ನಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಕೃಷಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು
ಬೀದರ್‌ನಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಕೃಷಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು   

‌ಬೀದರ್‌: ‘ಜಿಲ್ಲೆಯಲ್ಲಿ ಈಗ ಉತ್ತಮವಾಗಿ ಮಳೆ ಬೀಳುತ್ತಿದ್ದು, ಉದ್ದು ಮತ್ತು ಹೆಸರು ಬಿತ್ತನೆಗೆ ಇದು ಸಕಾಲವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಹೇಳಿದ್ದಾರೆ.

ಕೃಷಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಬಿತ್ತನೆ ಬೀಜ ವಿತರಣೆ ಹಾಗೂ ಕೃಷಿ ಸಂಬಂಧಿತ ಇತರ ವಿಷಯಗಳ ಮಾಹಿತಿ ಪಡೆದು ಅವರು ಮಾತನಾಡಿದರು.

‘ಪ್ರತಿವರ್ಷ ಈ ಸಮಯದಲ್ಲಿ ಮಳೆ ಪ್ರಮಾಣ ಕಡಿಮೆ ಇರುತ್ತಿತ್ತು. ಈಗ ಸರಿಯಾದ ಸಮಯಕ್ಕೆ ಮಳೆ ಬೀಳುತ್ತಿದೆ. ಹೀಗಾಗಿ, ಬೀದರ ಜಿಲ್ಲೆಯಲ್ಲಿ ಉದ್ದು, ಹೆಸರು, ಹೈಬ್ರಿಡ್ ಜೋಳ, ಸಜ್ಜೆ ಮತ್ತು ನವಣೆಯಂಥ ಸಿರಿಧಾನ್ಯಗಳ ಬಿತ್ತನೆಗೆ ಹೆಚ್ಚಿನ ಒತ್ತು ಕೊಡಬೇಕು’ ಎಂದು ಹೇಳಿದರು.

ADVERTISEMENT

‘ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸೋಯಾ ಬಿತ್ತನೆ ಬೀಜ ಕುರಿತು ಚರ್ಚಿಸಲಾಗಿದೆ. ಸೋಯಾ ಬೀಜ ಸರಿಯಾಗಿ ಮೊಳಕೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ. ಅಂಥ ಬೀಜಗಳನ್ನು ರೈತರಿಂದ ಹಿಂಪಡೆಯಲಾಗುತ್ತಿದೆ. ಬಿತ್ತನೆಗೆ ಯೋಗ್ಯವಲ್ಲದ ಸೋಯಾ ಬೀಜ ಬಿತ್ತನೆ ಮಾಡಿ ಆರ್ಥಿಕವಾಗಿ ನಷ್ಟ ಅನುಭವಿಸಬಾರದು’ ಎಂದು ಮನವಿ ಮಾಡಿದರು.

ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ಮಾತನಾಡಿ, ‘ಕಳೆದ ವರ್ಷ ಲಕ್ಷ ಕ್ವಿಂಟಲ್‌ಗೂ ಅಧಿಕ ಬಿತ್ತನೆ ಬೀಜ ವಿತರಿಸಲಾಗಿದೆ. ಜಿಲ್ಲೆಗೆ ಈ ವರ್ಷ 65 ಸಾವಿರ ಕ್ವೀಂಟಲ್‌ ಸೋಯಾ ಬೀಜ ಬಂದಿದೆ. 60 ಸಾವಿರ ಕ್ವಿಂಟಲ್‌ ಬೀಜಗಳನ್ನು 30 ರೈತ ಸಂಪರ್ಕ ಕೇಂದ್ರಗಳು ಮತ್ತು 112 ಹೆಚ್ಚುವರಿ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗಿದೆ’ ಎಂದು ತಿಳಿಸಿದರು.

‘ರೈತರು ತಮ್ಮ ಬಳಿ ಇರುವ ಹೆಸರು, ಉದ್ದು ಮತ್ತು ತೊಗರಿ ಬೀಜಗಳನ್ನು ಬಿತ್ತನೆ ಮಾಡಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಉಪ ಕೃಷಿ ನಿರ್ದೇಶಕ ಸೂರ್ಯಕಾಂತ ಬಿರಾದಾರ, ಸಹಾಯಕ ನಿರ್ದೇಶಕ ಎಂ.ಎ.ಅನ್ಸಾರಿ, ಮಾರ್ತಾಂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.