
ಬೀದರ್: ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಸರ್ವ ಧರ್ಮ ಸಮ್ಮೇಳನದ ಅಂಗವಾಗಿ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಅಲಂಕೃತ ರಥಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಹಾಗೂ ಸರ್ವ ಧರ್ಮ ಗುರುಗಳ ಮೆರವಣಿಗೆ ನಡೆಯಿತು.
ಮಲ್ಕಾಪುರ ಸಮೀಪದ ಭಾವ ಲಿಂಗ ಮಲ್ಲಿನಾಥ ಆಶ್ರಮದಿಂದ ಆರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳ ಮೂಲಕ ಸಾಗಿ ನೌಬಾದ್ ಸಮೀಪದ ಮಲ್ಲಿನಾಥ ಆಶ್ರಮದಲ್ಲಿ ಸಮಾರೋಪಗೊಂಡಿತು.
ಮೆರವಣಿಗೆಯಲ್ಲಿ ಒಂದು ರಥದಲ್ಲಿ ಸ್ವಾಮಿ ವಿವೇಕಾನಂದರ ಬೃಹತ್ ಭಾವಚಿತ್ರ ಇಡಲಾಗಿತ್ತು. ಇತರೆ ರಥಗಳಲ್ಲಿ ವಿವಿಧ ಧರ್ಮಗಳ ಗುರುಗಳು ಆಸೀನರಾಗಿದ್ದರು.
ಎಂಟು ಕಡೆಗಳಲ್ಲಿ ಜೆಸಿಬಿ ಮೂಲಕ ರಥಗಳ ಮೇಲೆ ಪುಷ್ಪ ವೃಷ್ಟಿ ಮಾಡಿ ಮೆರವಣಿಗೆಯನ್ನು ಸ್ವಾಗತಿಸಲಾಯಿತು. ಮೆರವಣಿಗೆ ಮಾರ್ಗದಲ್ಲಿನ ಮಹಾ ಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.
ಡೊಳ್ಳು ಕುಣಿತ, ಕೋಲಾಟ, ಲಂಬಾಣಿ ನೃತ್ಯ, ಭಜನಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಮೆರವಣಿಗೆ ಬಳಿಕ ಮಲ್ಲಿನಾಥ ಆಶ್ರಮದಲ್ಲಿ ಸರ್ವ ಧರ್ಮ ಸಮ್ಮೇಳನ ಜರುಗಿತು.
ಸಮ್ಮೇಳನದಲ್ಲಿ ಮಾತನಾಡಿದ ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಹವಾ ಮಲ್ಲಿನಾಥ ಮಹಾರಾಜರಿಗೆ ದೇಶವೇ ಮೊದಲಾಗಿದೆ. ಅವರ ದೇಶ ಪ್ರೇಮ ಮಾದರಿಯಾಗಿದೆ ಎಂದು ಹೇಳಿದರು.
ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಹುಡುಗಿಯ ವಿರೂಪಾಕ್ಷ ಶಿವಾಚಾರ್ಯ, ಲಾಡಗೇರಿಯ ಗಂಗಾಧರ ಶಿವಾಚಾರ್ಯ, ಮಳಚಾಪುರದ ಸದ್ರೂಪಾನಂದ ಸ್ವಾಮೀಜಿ, ಸೈಯದ್ ಷಾ ಮೈನೊದ್ದೀನ್ ಹುಸೇನಿ, ಅಮೃತರಾವ್ ಮುತ್ಯಾ, ಸುನೀಲ್ ಮಹಾರಾಜ, ಬಸಪ್ಪ ಹಿರೇವಗ್ಗೆ ಮೈಲಾರ್, ದೇವದಾಸ ಮಹಾರಾಜ, ಚನ್ನಬಸವ ಶಿವಾಚಾರ್ಯ, ಸೇಂಟ್ ಜೋಸೆಫ್ ಚರ್ಚ್ ನ ಫಾದರ್ ಡಿಸೋಜಾ, ಗುರುಮಿತ್ ಸಿಂಗ್, ಖಾಜಾ ಸಾಬ್ ಬಹಮನಿ, ಯಾದಗಿರಿ ಶ್ರೀ, ಸಂಗೋಳಗಿ ಶ್ರೀ, ದರ್ಗಾ ಹಜರತ್ ಅಬ್ದುಲ್ ಫೈಜ್ ಗುರುಗಳು, ಚಿದ್ರಿ ಶ್ರೀ, ಸುರೇಂದ್ರಗಿರಿ ಶ್ರೀ, ವಿಶ್ವಕರ್ಮ ಶ್ರೀ, ಬೀರಲಿಂಗೇಶ್ವರ ಮಠದ ಗೋಪಾಲ ಶ್ರೀಗಳು, ಆಣದೂರಿನ ಭಂತೆಜಿ, ಭಾಗೀರಥಿ ಮಾತೆ, ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.