ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಬಿದರಿ ಉತ್ಸವ ಅಂಗವಾಗಿ ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಿತು.
ಚಿತ್ರ ಬಿಡಿಸಿ ಸ್ಪರ್ಧೆಗೆ ಚಾಲನೆ ನೀಡಿದ ಮಾಜಿ ಶಾಸಕ ಅಶೋಕ ಖೇಣಿ ಮಾತನಾಡಿ, ಸಾಂಸ್ಕೃತಿಕ ಸಂಘ ಸಂಸ್ಥೆಗಳಿಂದ ದೇಶದ ಸಂಸ್ಕೃತಿಯ ಉಳಿವು ಸಾಧ್ಯವಾಗಿದೆ. ಬರುವ ದಿನಗಳಲ್ಲಿ ಬೀದರ್ ಉತ್ಸವ ಮಾದರಿಯಲ್ಲಿ ಬಿದರಿ ಉತ್ಸವ ಆಚರಿಸಿ ನಾಡಿನ ಸಂಸ್ಕೃತಿಯ ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಬಿದರಿ ವೇದಿಕೆ ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ವೇದಿಕೆಯ ಪ್ರಮುಖರಾದ ಅಪ್ಪಾರಾವ್ ಸೌದಿ ಮಾತನಾಡಿ, ಬಿದರಿ ಉತ್ಸವದಲ್ಲಿ ಕಬಡ್ಡಿ, ವಾಲಿಬಾಲ್, ಚಿತ್ರಕಲೆ, ದೇಶಿ ಕ್ರೀಡೆ, ಬೆಂಗಳೂರಿನ ವೀಣಾಮೂರ್ತಿ ವಿಜಯ ಅವರ ಅಲ್ಲೂರಿ ಸೀತಾರಾಂ ರಾಜು ಜಗತ್ ಮಾನ್ಯಂ ನೃತ್ಯ ರೂಪಕ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಯೋಗೀಶ್ ಚಿತ್ರಕಲಾ ಅಕಾಡೆಮಿ ಪ್ರಾಚಾರ್ಯ ಯೋಗೇಶ ಮಠದ, ಎಂ.ಬಿ. ಪಾಟೀಲ ಫೌಂಡೇಷನ್ ಅಧ್ಯಕ್ಷ ಬಸವರಾಜ ಪಿ. ಭತಮುರ್ಗೆ, ಡಿಎಸ್‍ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೈಜಿನಾಥ ಕಮಠಾಣೆ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸುರೇಶ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕಕುಮಾರ ಕರಂಜೆ ಇದ್ದರು.
ಖ್ಯಾತ ಬಾಲ ತಬಲಾ ವಾದಕ ರೋಶನ್ ರಮೇಶ ಕೋಳಾರ, ರಾಜೇಂದ್ರಸಿಂಗ್ ಪವಾರ್ ಅವರಿಂದ ಹಾರ್ಮೋನಿಯಂ ಸೋಲೋ, ನಿವೃತ್ತ ವಾರ್ತಾಧಿಕಾರಿ ಚಂದ್ರಕಾಂತ ಜಿ. ಅವರಿಂದ ತ್ರಿಭಾಷಾ ವಚನ ಗಾಯನ, ಉಷಾ ಪ್ರಭಾಕರ ಹಾಗೂ ರಾಣಿ ಸತ್ಯಮೂರ್ತಿ ತಂಡದಿಂದ ಭರತನಾಟ್ಯ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.