ADVERTISEMENT

ಜ. 7ಕ್ಕೆ ಬೃಹತ್ ಉದ್ಯೋಗ ಮೇಳ

ನಾಗಮಾರಪಳ್ಳಿ ಫೌಂಡೇಷನ್‍ನಿಂದ ಆಯೋಜನೆ: ಸೂರ್ಯಕಾಂತ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 14:50 IST
Last Updated 30 ನವೆಂಬರ್ 2022, 14:50 IST
ಸೂರ್ಯಕಾಂತ ನಾಗಮಾರಪಳ್ಳಿ
ಸೂರ್ಯಕಾಂತ ನಾಗಮಾರಪಳ್ಳಿ   

ಬೀದರ್‌: ಜಿಲ್ಲಾ ಆಡಳಿತ ವತಿಯಿಂದ ಹಮ್ಮಿಕೊಳ್ಳಲಾದ ಬೀದರ್ ಉತ್ಸವ ಪ್ರಯುಕ್ತ ಜಿಲ್ಲೆಯ ನಿರುದ್ಯೋಗಿಗಳಿಗೆ ನೆರವಾಗಲು ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಜ. 7 ರಂದು ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದೆ.


ಹಣಕಾಸು, ಬ್ಯಾಂಕಿಂಗ್, ಬ್ಯಾಂಕೇತರ ಹಣಕಾಸು ಸಂಸ್ಥೆ, ಮಾಹಿತಿ ತಂತ್ರಜ್ಞಾನ, ಆರೋಗ್ಯ, ಆಸ್ಪತ್ರೆ, ವ್ಯಾಪಾರ ಪ್ರಕ್ರಿಯೆ ಹೊರ ಗುತ್ತಿಗೆ (ಬಿಪಿಒ), ಕೃಷಿ, ಶಿಕ್ಷಣ, ಮೂಲಸೌಕರ್ಯ, ಚಿಲ್ಲರೆ ವ್ಯಾಪಾರ, ಔಷಧ, ರಾಸಾಯನಿಕ, ಸಂಚಾರ, ಭದ್ರತೆ, ರಿಯಲ್ ಎಸ್ಟೇಟ್ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದ ಒಟ್ಟು 80ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದು ಫೌಂಡೇಷನ್ ಅಧ್ಯಕ್ಷರೂ ಆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಮೇಳದಲ್ಲಿ ಪ್ರತಿಷ್ಠಿತ (ಫಾಚ್ರ್ಯೂನ್ 500) ಕಂಪನಿಗಳು ಭಾಗವಹಿಸಲಿವೆ. ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ನೆರವಾಗಲು ಮೇಳ ಸಂಘಟಿಸಲಾಗಿದೆ. ಫೌಂಡೇಷನ್‍ನಿಂದ 2016ರಲ್ಲಿ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 3,500 ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿತು. ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಮೇಳವು 350 ಮಂದಿಗೆ ಉದ್ಯೋಗ ಒದಗಿಸಿತು. ಈ ಬಾರಿಯ ಉದ್ಯೋಗ ಮೇಳದಲ್ಲಿ 4 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮೇಳ ಉದ್ಯೋಗಾವಕಾಶ ದೊರಕಿಸಿಕೊಡಲಿದೆ. ಜಿಲ್ಲೆಯ ಅಭ್ಯರ್ಥಿಗಳು ವಿವಿಧ ಕಂಪನಿಗಳ ಸಂದರ್ಶನಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಮೇಳಕ್ಕೆ ಈಗಾಗಲೇ ಭರದ ಸಿದ್ಧತೆ ಆರಂಭಿಸಲಾಗಿದೆ. ಮೇಳದಲ್ಲಿ ಅಭ್ಯರ್ಥಿಗಳ ಹೆಸರು ನೋಂದಣಿ, ಸಂದರ್ಶನ ಸೇರಿದಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಮೇಳದ ಕುರಿತು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9620203748 / 9071000027 ಸಂಪಕಿಸಬಹುದು. ಅಥವಾwww.suryanagmarpalli.inಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT