ADVERTISEMENT

ಶಕ್ತಿ ಪ್ರದರ್ಶನಕ್ಕೆ ಮುಂದಾದ ಈಶ್ವರ, ಭಗವಂತ

ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ಮೆರವಣಿಗೆ ಇಂದು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 16:05 IST
Last Updated 4 ನವೆಂಬರ್ 2020, 16:05 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪ, ಪ್ರತ್ಯಾರೋಪ ಕಾಂಗ್ರೆಸ್‌ನ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಸಂಸದ ಭಗವಂತ ಖೂಬಾ ಅವರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಇಬ್ಬರೂ ಮುಖಂಡರು ಗುರುವಾರ (ನ.5) ನಗರದಲ್ಲಿ ತಮ್ಮ ಕಾರ್ಯಕರ್ತರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಲು ಮುಂದಾಗಿದ್ದಾರೆ.

ವಸತಿ ಯೋಜನೆ ಅವ್ಯವಹಾರದಿಂದ ಭಾಲ್ಕಿ ತಾಲ್ಲೂಕಿನ ಜನರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಒತ್ತಾಯಿಸಿ 15 ಸಾವಿರ ಜನರನ್ನು ಸೇರಿಸಿ ಮೆರವಣಿಗೆ ನಡೆಸಲಾಗುವುದು ಎಂದು ಸಂಸದ ಭಗವಂತ ಖೂಬಾ ತಿಳಿಸಿದರೆ, ಬಡವರಿಗೆ ಮನೆಗಳು ದೊರೆಯದಂತೆ ಅಡ್ಡಗಾಲು ಹಾಕುತ್ತಿರುವ ಸಂಸದರ ವಿರುದ್ಧ ಕಾರ್ಯಕರ್ತರು ಹಾಗೂ ಫಲಾನುಭವಿಗಳೊಂದಿಗೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರು ಬೆಳಿಗ್ಗೆ 10.30ಕ್ಕೆ ಗಣೇಶ ಮೈದಾನದಲ್ಲಿ ಸೇರಿ ಪ್ರತಿಭಟನೆ ನಡೆಸಲು ನಿರ್ಧರಿಸಿದರೆ,
ಕಾಂಗ್ರೆಸ್‌ ಕಾರ್ಯಕರ್ತರು ಝೀರಾ ಫಂಕ್ಷನ್ ಹಾಲ್‍ನಲ್ಲಿ ಬೆಳಿಗ್ಗೆ 11ಕ್ಕೆ ಸಭೆ ನಡೆಸಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ADVERTISEMENT

ಬಡವರಿಗೆ ಆದ ಅನ್ಯಾಯದ ಕುರಿತು ಸರ್ಕಾರದ ಗಮನ ಸೆಳೆದು ವಸತಿ ರಹಿತರು ಹಾಗೂ ಬಡವರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ಹಮ್ಮಿಕೊಳ್ಳಲಾಗಿದೆ. ಶಾಸಕರ ದಮನಕಾರಿ ನೀತಿಯ ವಿರುದ್ಧ ಮುಂದಿನ ದಿನಗಳಲ್ಲಿಯೂ ಸಂಘರ್ಷ ಮುಂದುವರಿಯಲಿದೆ ಎಂದು ಸಂಸದ ಖೂಬಾ ಹೇಳಿದ್ದಾರೆ.

ಖೂಬಾ ಅವರಿಗೆ ಆಡಳಿತ ಪಕ್ಷದ ಸಂಸದ ಎನ್ನುವುದೇ ಮರೆತು ಹೋದಂತಿದೆ. ಇವರು ಯಾವ ಪುರುಷಾರ್ಥಕ್ಕಾಗಿ ಹಾಗೂ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ, ಬಡ ಫಲಾನುಭವಿಗಳ ವಿರುದ್ಧವೋ, ಸರ್ಕಾರದ ವಿರುದ್ಧವೋ ಎಂದು ಶಾಸಕ ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.

‘ವಸತಿ ಯೋಜನೆ ಕುರಿತು ಬಹಿರಂಗ ಚರ್ಚೆಗೆ ಬಾರದೆ, ಹೆದರಿ ಹಿಮ್ಮೆಟ್ಟಿದ ಬಿಜೆಪಿ ಸಂಸದ ಭಗವಂತ ಖೂಬಾ ಈಗ ಉತ್ತರಕುಮಾರನಂತೆ ಮೆರೆಯುತ್ತ, ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಮಂಡಿಸುವುದಾಗಿ ಹೇಳಿರುವುದು ಅತಿರೇಕದ ಪರಮಾವಧಿಯಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.