ADVERTISEMENT

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು

ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 15:14 IST
Last Updated 14 ಏಪ್ರಿಲ್ 2019, 15:14 IST
ಸಮತಾ ಸೈನಿಕ ದಳದ ಕಾರ್ಯಕರ್ತರು ಡಾ.ಅಂಬೇಡ್ಕರ್‌ ಪ್ರತಿಮೆಗೆ ಗೌರವ ವಂದನೆ ಸಲ್ಲಿಸಿದರು
ಸಮತಾ ಸೈನಿಕ ದಳದ ಕಾರ್ಯಕರ್ತರು ಡಾ.ಅಂಬೇಡ್ಕರ್‌ ಪ್ರತಿಮೆಗೆ ಗೌರವ ವಂದನೆ ಸಲ್ಲಿಸಿದರು   

ಬೀದರ್‌: ಜಿಲ್ಲಾ ಆಡಳಿತ ಆಯೋಜಿಸಿದ್ದ ಅಂಬೇಡ್ಕರ್‌ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆ ಅಬ್ಬರದ ಪ್ರಚಾರದ ಮಧ್ಯೆಯೂ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಜನರಿಗೆ ಅಚ್ಚರಿ ಮೂಡಿಸಿದರು.

ಡಾ.ಅಂಬೇಡ್ಕರ್‌ ವೃತ್ತದಲ್ಲಿ ಬೆಳಿಗ್ಗೆ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಭಾವಚಿತ್ರ ಹಾಗೂ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಅರವಿಂದಕುಮಾರ ಅರಳಿ ಗೌರವ ಸಮರ್ಪಿಸಿದರು.

ಇದಕ್ಕೂ ಮೊದಲು ಶ್ವೇತ ಹಾಗೂ ನೀಲಿ ಸಮವಸ್ತ್ರ ಧರಿಸಿದ್ದ ಸಮತಾ ಸೈನಿಕ ದಳದ ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕವಾಯತು ನಡೆಸಿ ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಿದರು. ಬೌದ್ಧ ಭಿಕ್ಕುಗಳು ಪಂಚಶೀಲ ಧ್ವಜಾರೋಹಣ ನೆರವೇರಿಸಿದರು.

ನಂತರ ಡಾ.ಅಂಬೇಡ್ಕರ್‌ ವೃತ್ತದಿಂದ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯುದ್ದಕ್ಕೂ ಡಾ. ಅಂಬೇಡ್ಕರ್‌ ಅವರನ್ನು ಕುರಿತ ಗೀತೆಗಳು ಮೊಳಗಿದವು. ಯುವಕರು ಕುಣಿದು ಸಂಭ್ರಮಿಸಿದರು. ಕೆಲ ಗಣ್ಯರು ಕೂಡ ಹೆಜ್ಜೆ ಹಾಕಿ ಮೆರವಣಿಗೆ ಮೆರುಗು ಹೆಚ್ಚಿಸಿದರು.

ADVERTISEMENT

ಮೆರವಣಿಗೆಯು ಮಹಾವೀರ ವೃತ್ತ, ಬಸವೇಶ್ವರ ವೃತ್ತ, ನಯಾಕಮಾನ್‌, ಚೌಬಾರಾ, ಗಾವಾನ್‌ ವೃತ್ತ, ಮುಖ್ಯ ರಸ್ತೆ, ಶಹಾಗಂಜ್‌ ಕಮಾನ್‌, ಕ್ರಾಂತಿ ಗಣೇಶ ಮಾರ್ಗವಾಗಿ ಹಾಯ್ದು ಮತ್ತೆ ಅಂಬೇಡ್ಕರ್‌ ವೃತ್ತಕ್ಕೆ ಬಂದು ಮುಕ್ತಾಯಗೊಂಡಿತು.

ಪ್ರಖರ ಬಿಸಿಲು ಇದ್ದರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಂಬೇಡ್ಕರ್‌ ಅಭಿಮಾನಿಗಳ ಉತ್ಸಾಹ ಕಡಿಮೆ ಆಗಲಿಲ್ಲ. ನಗರದ ವಿವಿಧ ಬಡಾವಣೆಗಳ ಯುವಕರು ಪ್ರತ್ಯೇಕ ಅಲಂಕೃತ ವಾಹನಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಪ್ರಮುಖರಾದ ಮಾರುತಿ ಬೌದ್ದೆ, ಅನಿಲಕುಮಾರ ಬೆಲ್ದಾರ್, ರಾಜು ಕಡ್ಯಾಳ್, ಬಾಬುರಾವ್ ಪಾಸ್ವಾನ್, ಮಹೇಶ ಗೋರನಾಳಕರ್, ಪ್ರದೀಪ ನಾಟೇಕರ್, ತಿಪ್ಪಣ್ಣ ಭೋಸ್ಲೆ, ಸಂಜಯ ಜಾಗೀರದಾರ್, ರಾಜಕುಮಾರ ಮೂಲಭಾರತಿ, ಗಂಗಮ್ಮ ಫುಲೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.