ADVERTISEMENT

ಬಡ ವಿದ್ಯಾರ್ಥಿಯ ಎಂಬಿಬಿಎಸ್‌ ಓದಿಗೆ ನೆರವು- ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ

ಭಾಲ್ಕಿ: ನೆರವಿನ ಭರವಸೆ ನೀಡಿದ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 4:18 IST
Last Updated 21 ಫೆಬ್ರುವರಿ 2022, 4:18 IST
ಭಾಲ್ಕಿಯ ಶಿವಾಜಿ ವೃತ್ತದ ಬಳಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿ ಬಾಲಗಣೇಶ ಶಿವಾಜಿರಾವ್‌ಗೆ ಸನ್ಮಾನಿಸಲಾಯಿತು
ಭಾಲ್ಕಿಯ ಶಿವಾಜಿ ವೃತ್ತದ ಬಳಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿ ಬಾಲಗಣೇಶ ಶಿವಾಜಿರಾವ್‌ಗೆ ಸನ್ಮಾನಿಸಲಾಯಿತು   

ಭಾಲ್ಕಿ: ಇಲ್ಲಿಯ ಶಿವಾಜಿ ವೃತ್ತದ ಬಳಿ ನಡೆದ ಸಾರ್ವಜನಿಕ ಶಿವ ಜಯಂತಿ ಕಾರ್ಯಕ್ರಮದಲ್ಲಿ ನೀಟ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಎಂಬಿಬಿಎಸ್‌ ವೈದ್ಯಕೀಯ ಸೀಟ್‌ ಪಡೆದ ಬಡ ವಿದ್ಯಾರ್ಥಿ ಬಾಲಗಣೇಶ ಶಿವಾಜಿರಾವ್‌ ಅವರ ಮುಂದಿನ ಓದಿಗೆ ಅಡ್ಡಿಯಾದ ಬಡತನದ ಬಗ್ಗೆ ಅರಿತ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಅವರು, ವಿದ್ಯಾರ್ಥಿಯ ಎಂಬಿಬಿಎಸ್‌ ವ್ಯಾಸಂಗದ ನಾಲ್ಕು ವರ್ಷದ ₹ 2.40 ಲಕ್ಷ ವೆಚ್ಚವನ್ನು ತಾವು ಭರಿಸುವುದಾಗಿ ಸಾರ್ವಜನಿಕರ ಸಮ್ಮುಖದಲ್ಲಿ ಘೋಷಿಸಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಭಾಲ್ಕಿಯಲ್ಲಿ ಶಿವಾಜಿ, ಬಸವಣ್ಣ, ಮಹಾತ್ಮ ಗಾಂಧೀಜಿ ಮೂರ್ತಿ ನಿರ್ಮಾಣಕ್ಕೆ ನಾನು ಶಾಸಕನಿದ್ದ ಅವಧಿಯಲ್ಲಿ ತಲಾ ₹ 15 ಲಕ್ಷ ನೀಡಿ ಮೂರ್ತಿಗಳ ನಿರ್ಮಾಣಕ್ಕೆ ಶ್ರಮಿಸಿದ್ದೇನೆ. ಶಿವಾಜಿ ಜಯಂತಿ ಆಚರಿಸಲು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರ ಬಳಿಗೆ ನಿಯೋಗ ಕೊಂಡೊಯ್ದು ಒತ್ತಡ ಹಾಕಿದ್ದೇನೆ. ಆದರೆ, ಕೆಲವರು ಸುಳ್ಳು ಹೇಳುತ್ತಿದ್ದಾರೆ. ಇದು ಖಂಡನೀಯ. ಸತ್ಯ ಎಂದೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಮಾತನಾಡಿ, ಮರಾಠಾ ಸಮಾಜದ ಏಳಿಗೆ ಬಗ್ಗೆ ಬಿಜೆಪಿ ಸರ್ಕಾರಕ್ಕೆ ವಿಶೇಷ ಕಾಳಜಿ ಇದ್ದು, ಬಸವಕಲ್ಯಾಣದ ಮಾಜಿ ಶಾಸಕ ಮಾರುತಿರಾವ್‌ ಮುಳೆ ಅವರನ್ನು ಮರಾಠಾ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದರು.

ADVERTISEMENT

ಸಾರ್ವಜನಿಕ ಶಿವಾಜಿ ಜಯಂತಿ ಅಧ್ಯಕ್ಷ ವೈಜಿನಾಥ ತಗಾರೆ ಮಾತನಾಡಿ, ಅನ್ಯಾಯ ಮತ್ತು ಹಿಂಸೆಯ ವಿರುದ್ಧ ಹೋರಾಡಿ ಸರ್ವ ಧರ್ಮಗಳ ಏಳಿಗೆಗೆ ಶ್ರಮಿಸಿದ್ದ ಶ್ರೇಷ್ಠ ರಾಜ ಶಿವಾಜಿ ಮಹಾರಾಜ್‌ ಆಗಿದ್ದರು ಎಂದರು.

ಕೊರೊನಾ ಕಾಲದಲ್ಲಿ ಅವಿರತವಾಗಿ ಶ್ರಮಿಸಿದ ವೈದ್ಯರನ್ನು ಸನ್ಮಾನಿಸಲಾಯಿತು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದೇವರು, ನಿವರ್ತಿ ಮಹರಾಜ್‌, ಭಂತೆ ನೌಪಾಲ್‌, ಹಜರತ್‌ ಖಾಜಾ ಹುಸೇನಸಾಬ್‌, ಮುಖಂಡರಾದ ಕಿಶನರಾವ್‌ ಪಾಟೀಲ ಇಂಚುರಕರ್‌, ಶಿವರಾಜ ಗಂದಗೆ, ಪದ್ಮಾಕಾರ ಪಾಟೀಲ, ಗೋವಿಂದರಾವ್‌ ಬಿರಾದಾರ, ಜನಾರ್ಧನ್ ಬಿರಾದಾರ, ಯಾದವರಾವ್‌ ಕನಸೆ, ಸತೀಶಕುಮಾರ ಸೂರ್ಯವಂಶಿ, ಕಿರಣ ಖಂಡ್ರೆ, ಸುನಿಲ್‌ ಶಿಂಧೆ, ಪಾಂಡುರಂಗ ಕನಸೆ, ಜೈರಾಜ ಕೊಳ್ಳಾ, ದೀಪಕ ಶಿಂಧೆ, ಸುಭಾಷ್ ಮಾಶೆಟ್ಟೆ, ಬಾಲಾಜಿ ಖಾಶಂಪುರೆ, ಪ್ರವೀಣ ಸಾವರೆ, ಸಂತೋಷ ತಗರಖೇಡ, ಶರದ ದುರ್ಗಳೆ, ಶಿವಾಜಿ ಸೋಂಪುರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.