ADVERTISEMENT

ಬಳ್ಳಾರಿ: ಬಿಜೆಪಿ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 10:33 IST
Last Updated 29 ಅಕ್ಟೋಬರ್ 2019, 10:33 IST
   

ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ್ ಅವರನ್ನು ನೇಮಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡರಿಗೆ
ವಿವಿಧ ಘಟಕಗಳ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಸಾಮೂಹಿಕವಾಗಿ ರಾಜೀನಾಮೆ ನೀಡಿದರು.

ನಗರದಲ್ಲಿ ಚನ್ನಬಸವನಗೌಡರು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ರಾಜೀನಾಮೆ ಪ್ರಸಂಗ ನಡೆಯಿತು.

ಜಿಲ್ಲೆ, ರಾಜ್ಯ ಮತ್ತು ಮಂಡಲಗಳ ಪದಾಧಿಕಾರಿಗಳು ಹಾಗೂ ಹಡಗಲಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕುಡಿತಿನಿ, ತೋರಣಗಲ್ಲು ಸೇರಿ ಪಕ್ಷದ ವಿವಿಧ ವಿಭಾಗಗಳ ಒಟ್ಟು 48 ಮಂದಿ ಪದಾಧಿಕಾರಿಗಳು ರಾಜೀನಾಮೆ ನೀಡಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೆನ್ನಬಸವನಗೌಡ ಅವರು, ' ಪಕ್ಷದಲ್ಲಿ ನಡೆಯುತ್ತಿರುವ ವಿಚಾರಗಳು ಶೋಭೆ ತರುವಂಥದ್ದಲ್ಲ. ದೇಶದಲ್ಲಿ ಬಿಜೆಪಿಯು ವಿಚಾರ ಮತ್ತು ತತ್ವ ಸಿದ್ದಾಂತಗಳ ಮೇಲೆ
ಬೆಳೆಯುತ್ತಿರುವ ಪಕ್ಷ‌. ಅಂತಹ ವ್ಯವಸ್ಥೆಯಲ್ಲಿ ಪಕ್ಷಕ್ಕೆ, ಪದಾಧಿಕಾರಿಗಳಿಗೆ ಮುಜುಗರ ಬಂದ ಹಿನ್ನೆಲೆಯಲ್ಲಿ ಅಧಿಕಾರ ತ್ಯಾಗ ಮಾಡುವ ಮೂಲಕ ಪಕ್ಷ ಉಳಿಸುವ ಉದ್ದೇಶ ನಮ್ಮದು ಎಂದರು.

ಈಚೆಗೆ ನಡೆದ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಕೆಲ ದಿನಗಳ ಹಿಂದೆ ರಾಜೀನಾಮೆಯನ್ನು ಸಲ್ಲಿಸಿದ್ದೆ. ಬುಡಾ ಅಧ್ಯಕ್ಷರ ನೇಮಕಕ್ಕೆ ನಮ್ಮ ವಿರೋಧ ಇದೆ. ಪದಾಧಿಕಾರಿಗಳಿಗೆ ಉತ್ತರ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಕ್ಷಣ ರಾಜೀನಾಮೆ ನೀಡಿದ್ದೆ' ಎಂದರು.

ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿಯೊಂದಿಗೂ ಚರ್ಚಿಸಿಲ್ಲ. ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರನ್ನು ಗುರುತಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

'ಪಕ್ಷಕ್ಕೆ ಮುಜುಗರ ಉಂಟು ಮಾಡುವ ಉದ್ದೇಶ ನಮ್ಮದಲ್ಲ. ದಮ್ಮೂರು ಶೇಖರ್ ಅಧಿಕಾರ ಸ್ವೀಕಾರಕ್ಕೂ ಮುನ್ನ ನನಗೆ ಕರೆ ಮಾಡಿದ್ದರು. ಅವರಿಗೆ ನನ್ನ ನಿಲುವು ಬದಲಾಗಲ್ಲ ಎಂದು ಹೇಳಿದ್ದೆ. ಕೆಲ ಕಾಲ ಸುಮ್ಮನಿರಿ. ಚರ್ಚಿಸುವ ಅವಶ್ಯಕತೆ ಇದೆ‌ ಎಂದು ಹೇಳಿದ್ದೆ ಎಂದರು.

ಸೋಮವಾರ ದಮ್ಮೂರ್ ಶೇಖರ್ ಅವರು ಅಧಿಕಾರ ಸ್ವೀಕರಿಸುವಾಗ ಶಾಸಕ ಸೋಮಶೇಖರರೆಡ್ಡಿ, ಜಿಲ್ಲಾ ಘಟಕದಅಧ್ಯಕ್ಷರ ಅವಧಿ ಹದಿನೈದು ದಿನಗಳಲ್ಲಿ ಮುಗಿಯುವ ಕಾರಣ ರಾಜೀನಾಮೆ ನೀಡಿದ್ದಾರೆ. ಅವರ ಸಾಮರ್ಥ್ಯ ಏನೆಂದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ ಅವಧಿ ಇನ್ನೂ ಹದಿನೈದು ದಿನ ಇದೆ ಎಂದು ಯಾರು ಹೇಳಿದರು. ಅದನ್ನು ತೀರ್ಮಾನ ಮಾಡಬೇಕಾದವರು ಯಾರು? ನಮ್ಮ ಸಾಮರ್ಥ್ಯವನ್ನು ಯಾವ ಮನದಂಡದ ಮೇಲೆ ಅಳೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.

'ನಾನು ಹಿಂಬಾಲಿಗಿನಿಂದ ರಾಜಕೀಯಕ್ಕೆ ಬಂದವನಲ್ಲ. 21ನೇ ವಯಸ್ಸಿಗೆ ಗ್ರಾಮಪಂಚಾಯ್ತಿ ಅಧ್ಯಕ್ಷನಾದೆ. ನಂತರದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ‌. ವೈಯಕ್ತಿಕ ಟೀಕೆ ಶೋಭೆಯಲ್ಲ ಹಾಗೂ ಜಿಲ್ಲಾಧ್ಯಕ್ಷನಾಗಿ ನನ್ನ ಸಾಮರ್ಥ್ಯ ಕೇಳುವುದಾದರೆ ಹಿನ್ನೆಲೆಯನ್ನು ನೋಡಿಕೊಂಡು ಮಾತಾಡಬೇಕಿತ್ತು. ಅವರ ಮಾತುಗಳಿಂದ ನನಗೆ ತುಂಬಾ ನೋವಾಗಿದೆ ಎಂದರು.

ಪದಾಧಿಕಾರಿಗಳ ವಿಚಾರದಲ್ಲಿ ಹಗುರವಾಗಿ ಮಾತಾಡಿದಾಗ ಸ್ವಾಭಿಮಾನ ಮತ್ತು ಪಕ್ಷಕ್ಕೆ ಧಕ್ಕೆಯಾಗುತ್ತದೆ. ಜಿಲ್ಲೆಯ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಪಕ್ಷ ಉಳಿಯಬೇಕಾದರೆ ಹಿರಿಯರು ಸರಿಯಾದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.

'ಸೋಲಿನ ಹೊಣೆಯನ್ನು ಮಾತ್ರ ಜಿಲ್ಲಾ ಘಟಕದ ಅಧ್ಯಕ್ಷರ ಮೇಲೆ ಹೊರಿಸಿ ಗೆಲುವಿನಲ್ಲಿ ಹೊಣೆಗಾರಿಕೆ ಯಾಕೆ ಕೊಡಲ್ಲ‌. ಪಕ್ಷದಲ್ಲಿ ಅಮಿತ್ ಶಾ ಸೇರಿ ಎಲ್ಲ ಪದಾಧಿಕಾರಿಗಳು ಒಂದೇ. ಎಲ್ಲರೂ ಪದಾಧಿಕಾರಿಗಳನ್ಬು ಗೌರವಿಸಬೇಕು. ರೆಡ್ಡಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾಗ ಅವರ ಸಾಮರ್ಥ್ಯ ಏನಿತ್ತು. ಎಷ್ಟು ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿದರು ಎಂದು ಪ್ರಶ್ನಿಸಿದರು.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎ ರಾಮಲಿಂಗಪ್ಪ ಮಾತನಾಡಿ, ದಮ್ಮೂರು ಶೇಖರ್ ನೇಮಕ ರದ್ದುಪಡಿಸುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ದಮ್ಮೂರು ಶೇಖರ್ ಪಕ್ಷಕ್ಕೆ ಬಂದು ಇನ್ನೂ ಮೂರು ವರ್ಷ ಆಗಿಲ್ಲ.ಆತನ ಮೇಲೆ ಇಷ್ಟೊಂದು ಅಕ್ಕರೆ ಯಾಕೆ? ಯಾರು ಆತ ಎಂದು ಪ್ರಶ್ನಿಸಿದರು.

ಜಿಲ್ಲಾ ಘಟಲದ ಅಧ್ಯಕ್ಷರ ಶಕ್ತಿ ಏನೆಂದು ತೋರಿಸಲಿದ್ದೇವೆ. ಬಳ್ಳಾರಿಯಲ್ಲಿ ನ್ಯಾಯ ಸಿಗುವವರೆಗೆ ಬೂತ್ ಮಟ್ಟದ ಕಾರ್ಯಕರ್ತವರೆಗೆ ರಾಜೀನಾಮೆ ಕೊಡಲಿದ್ದೆವೆ ಎಂದು ಹೇಳಿದರು.

ಮುಖಂಡರಾದ ಹನುಮಂತಪ್ಪ, ಮುರಾರಿಗೌಡ, ಸುಗುಣ, ಹನುಮಂತಪ್ಪ, ವಿರೂಪಾಕ್ಷ ಗೌಡ, ರಾಮದಾಸ್, ಶರಣ್ಪ,ಕೋಗಳಿ ಸಿದ್ದನಗೌಡ, ಎಂ.ಬಿ.ಬಸವರಾಜ, ನಿಜೀರ್ ಪಾಷ, ಸುಬ್ಬಾರಾವ್, ರಘು, ಅನಂತಪದ್ಮನಾಭ, ಸುರೇಶ್ ಐನಾಥರೆಡ್ಡಿ, ಪ್ರಕಾಶ, ಮಲ್ಲಿಕಾರ್ಜುನ ಗೌಡ, ಚೆನ್ನನಗೌಡ, ಅಂಬರೀಷ್, ಕುಮಾರನಾಯ್ಕ, ಶ್ಯಾಮ್, ದೇವೇಂದ್ರನಾಯ್ಕ, ರಾಮಚಂದ್ರ, ಕುಡಿತಿನಿ ರವೀಂದ್ರ, ಮಲ್ಲಿಕಾರ್ಜುನ ರೆಡ್ಡಿ ಪಂಪಾರೆಡ್ಡಿ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.