ADVERTISEMENT

ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ: ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ರಣಕಹಳೆ

ಬಸವಕಲ್ಯಾಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 13:31 IST
Last Updated 3 ಮಾರ್ಚ್ 2023, 13:31 IST
ಬಸವಕಲ್ಯಾಣದ ರಥ ಮೈದಾನದಲ್ಲಿ ಶುಕ್ರವಾರ ಬಿಜೆಪಿಯಿಂದ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಇದ್ದರು
ಬಸವಕಲ್ಯಾಣದ ರಥ ಮೈದಾನದಲ್ಲಿ ಶುಕ್ರವಾರ ಬಿಜೆಪಿಯಿಂದ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಇದ್ದರು   

ಬೀದರ್: ಕಲ್ಯಾಣ ಕರ್ನಾಟಕದಲ್ಲಿ ವಿಜಯ ಪತಾಕೆ ಹಾರಿಸಲು ಬಸವಕಲ್ಯಾಣದಲ್ಲಿ ಬಿಜೆಪಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡುವ ಮೂಲಕ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದರು.

ಗುರುವಾರ ರಾತ್ರಿಯೇ ವಿಶೇಷ ವಿಮಾನದ ಮೂಲಕ ಬೀದರ್‌ಗೆ ಬಂದಿದ್ದ ಅಮಿತ್‌ ಶಾ ಅವರು ಶುಕ್ರವಾರ ಬೆಳಿಗ್ಗೆ ಜಿಲ್ಲೆಯ ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಕಾಂಗ್ರೆಸ್‌ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವಂತೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡಬೇಕು ಎಂದು ಸೂಚಿಸಿದರು.

ನಂತರ ಗುರುದ್ವಾರಕ್ಕೆ ನೀಡಿ ಗುರುಗ್ರಂಥ ಸಾಹೀಬ ದರ್ಶನ ಪಡೆದು ಕರ್ನಾಟಕದಲ್ಲಿ ಯಾತ್ರೆ ಆರಂಭಿಸಿದ ಅವರು, ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಭೇಟಿ ಕೊಟ್ಟರು.

ADVERTISEMENT

ವಿಜಯ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅಮಿತ್‌ ಶಾ, ‘ಈಶಾನ್ಯದ ನಾಗಾಲ್ಯಾಂಡ್, ತ್ರಿಪುರಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಮೋದಿ ಅವರ ಜಾದೂ ಎಲ್ಲ ಕಡೆ ಆವರಿಸಿದೆ’ ಎಂದು ತಿಳಿಸಿದರು.

‘ಗುರುನಾನಕರು ಬೀದರ್‌ಗೆ ಭೇಟಿ ಕೊಟ್ಟಿದ್ದ ಗುರುದ್ವಾರದಲ್ಲಿ ಹಣೆ ಹಚ್ಚಿ ನಮಿಸಿದ್ದೇನೆ. ಬಸವ ಭೂಮಿಯಲ್ಲಿ ಬಸವಣ್ಣನಿಗೆ ಶ್ರದ್ಧಾಂಜಲಿ ಸಲ್ಲಿಸುವೆ. ಕಲ್ಯಾಣ ಕರ್ನಾಟಕದ ವಿಜಯ ಸಂಕಲ್ಪ ಯಾತ್ರೆ ಬಸವಕಲ್ಯಾಣದಿಂದ ಶುರುವಾಗಿದೆ. ಯಾತ್ರೆ ಕಲ್ಯಾಣ ಕರ್ನಾಟಕದ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಂಕಲ್ಪ ಮಾಡಲಿದೆ. ಕರ್ನಾಟಕದ ಬಡವರ ಕಲ್ಯಾಣವೇ ಬಿಜೆಪಿ ಗುರಿಯಾಗಿದೆ’ ಎಂದರು.

‘ವಿಜಯ ಸಂಕಲ್ಪ ಯಾತ್ರೆ 31 ಜಿಲ್ಲೆಗಳಲ್ಲಿ 8 ಸಾವಿರ ಕಿ.ಮೀ ಸಂಚರಿಸಲಿದೆ. ಈ ಅವಧಿಯಲ್ಲಿ 100ಕ್ಕೂ ಹೆಚ್ಚು ರೋಡ್‌ ಶೋ, 80ರಿಂದ 100 ದೊಡ್ಡ ಸಮಾರಂಭಗಳು, 600ಕ್ಕೂ ಅಧಿಕ ರಸ್ತೆ ಮೇಲೆ ಸಭೆಗಳು, 200ಕ್ಕೂ ಅಧಿಕ ಸಮಾಜದ ಸಭೆಗಳು ನಡೆಯಲಿವೆ. 50ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕರ್ನಾಟಕದ ಜನತೆಗೆ ಕೃತಜ್ಞತೆ ಸಲ್ಲಿಸಲು ಬರಲಿದ್ದಾರೆ’ ಎಂದು ತಿಳಿಸಿದರು.

ಕೆಸರಲ್ಲಿ ಸುಗಂಧ ಅರಳಿಸುವುದು ಕಮಲದ ಗುಣ: ‘ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷ ಮೋದಿ ವಿರುದ್ಧ ಅಪಶಬ್ದ ಬಳಸಿ ವಾಗ್ದಾಳಿ ನಡೆಸಿದೆ. ಮೋದಿ ನಿಮ್ಮ ಗೋರಿ ಅಗೆಯುತ್ತಿದ್ದೇವೆ ಎನ್ನುತ್ತಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮೊದಲಾದವರು ಕೆಸರು ಎರಚಿದಷ್ಟು ಕಮಲ ಅರಳಲಿದೆ. ಕೆಸರಲ್ಲಿ ಸುಗಂಧ ಅರಳಿಸುವುದು ಕಮಲದ ಗುಣವಾಗಿದೆ. ಪ್ರಧಾನಿಯ ಸಾವಿಗೆ ಪ್ರಾರ್ಥಿಸುತ್ತಿರುವ, ದೇಶವನ್ನು ಅಧೋಗತಿಗೆ ತಂದ ಕಾಂಗ್ರೆಸ್‌ಗೆ ಯಾರೂ ಮತ ಕೊಡಬಾರದು’ ಎಂದು ಮನವಿ ಮಾಡಿದರು.

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ವಂಶಾಡಳಿತ ಪಕ್ಷಗಳಾಗಿವೆ. ಜೆಡಿಎಸ್‌ಗೆ ಚುನಾವಣೆಯಲ್ಲಿ 50 ಸೀಟು ಸಿಕ್ಕರೂ ಸಾಕು ಅದು ಮತ್ತೆ ಕಾಂಗ್ರೆಸ್‌ನೊಂದಿಗೆ ಸೇರಿಕೊಳ್ಳುತ್ತದೆ. ಇದಲ್ಲದೇ ಕಾಂಗ್ರೆಸ್ ತುಕಡೆ ತುಕಡೆ ಗ್ಯಾಂಗ್‌ಗಳನ್ನು ಒಗ್ಗೂಡಿಸುತ್ತದೆ’ ಎಂದು ತಿಳಿಸಿದರು.

‘ರಾಣಿ ಅಬ್ಬಕ್ಕ, ಮದಕರಿ ನಾಯಕ, ಕೆಂಪೇಗೌಡರ ನಾಡು ಇದಾಗಿದೆ. ಇದೇ ನಾಡಿನಲ್ಲಿ ಉಗ್ರವಾದಿಗಳಿಗೆ ಬೆಂಬಲ ನೀಡುವ ಕಾಂಗ್ರೆಸ್‌ ಸಹ ಇದೆ. ಪಿಎಫ್‌ಐಗೆ ಮೋದಿ ಸರ್ಕಾರ ನಿಷೇಧಿಸಿದೆ. ಇಂದಿರಾ ಗಾಂಧಿ ಅವರು ನಿಜಲಿಂಗಪ್ಪ ಅವರನ್ನು ಅವಮಾನಿಸಿದ್ದರು. ನಂತರ ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ ಅವರಿಗೆ ಅವಮಾನ ಮಾಡಿದರು. ಈಗ ರಾಹುಲ್‌ ಪ್ರಧಾನಿಯನ್ನು ಅವಮಾನಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಕಾಶ್ಮೀರಕ್ಕೆ ನೀಡಿರುವ ಸಂವಿಧಾನದ ಕಲಂ 370 ರದ್ದುಗೊಳಿಸಿದರೆ ರಕ್ತಪಾತ ಆಗಲಿದೆ, ರಕ್ತದ ಹೊಳೆ ಹರಿಯಲಿದೆ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಹೇಳಿದರು. ಆದರೆ, ಒಂದು ಹರಳು ಅಲುಗಾಡಲಿಲ್ಲ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಸೇರಿ ಕಾಂಗ್ರೆಸ್‌ನಲ್ಲಿ 10 ಮಂದಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಇಂತವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೆ ಎಂದು ಪ್ರಶ್ನಿಸಿದರು. ಬಿಜೆಪಿಗೆ ಪೂರ್ಣ ಬಹುಮತ ಕೊಡುವ ಮೂಲಕ ಅಭಿವೃದ್ಧಿ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ಹೇಳಿದರು.

‘ಅಯೋಧ್ಯೆಯಲ್ಲಿ ರಾಮ ಮಂದಿರ, ಕಾಶಿ, ಸೋಮನಾಥ, ಭದ್ರಿನಾಥ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿವೆ. ಇಲ್ಲಿ ಅನುಭವ ಮಂಟಪದ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸುವ ಕೆಲಸ ಬಿಜೆಪಿ ಮಾಡುತ್ತಿದೆ’ ಎಂದು ಹೇಳಿದರು.

‘ಬೀದರ್, ಕಲಬುರಗಿ, ಬಳ್ಳಾರಿ 400 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ.

ಬೀದರ್‌ನಲ್ಲಿ ಸಿಪೆಟ್, ವಿಶ್ವವಿದ್ಯಾಲಯ, ಕೈಗಾರಿಕೆ ಕ್ಲಸ್ಟರ್‌, ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿದೆ. ಜಿಲ್ಲೆಯ 1.75 ಲಕ್ಷ ಮನೆಗಳಿಗೆ ಶುದ್ಧ ನೀರು ಪೂರೈಸಲಾಗುತ್ತಿದೆ’ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ‍ ಪಾಟೀಲ ಮುನೇನಕೊಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.