ADVERTISEMENT

ತಂದೆಯಂತೆ ಸಮಾಜ ಸೇವೆಗೆ ಆಶೀರ್ವದಿಸಿ: ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 16:07 IST
Last Updated 13 ನವೆಂಬರ್ 2020, 16:07 IST

ಬಸವಕಲ್ಯಾಣ: ‘ನನ್ನ ತಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೆ ರಾಜಕೀಯದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಎಲ್ಲ ಮಠಾಧೀಶರು ಆಶೀರ್ವಾದ ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ಇಲ್ಲಿನ ಅನುಭವ ಮಂಟಪದಲ್ಲಿ ಶುಕ್ರವಾರ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮ ಹಾಗೂ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಈ ಭಾಗದ ಸಂಸದರ ಮನವಿ ಮೇರೆಗೆ ಅನುಭವ ಮಂಟಪದ ದರ್ಶನ ಪಡೆಯಲು ಸಹಜವಾಗಿ ಬಸವಕಲ್ಯಾಣಕ್ಕೆ ಬಂದಿದ್ದೇನೆ. ಮರಾಠಾ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರ ಬೇಡಿಕೆಗಳನ್ನು ಆಲಿಸಿದ್ದೇನೆ. ಅವುಗಳನ್ನು ಈಡೇರಿಸುವ ದಿಸೆಯಲ್ಲಿ ಪಕ್ಷ ಹಾಗೂ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ನಾನು ಯಾವುದೇ ಕಾರಣಕ್ಕೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಅಲ್ಲ. ನಾನಂತೂ ಕಣಕ್ಕಿಳಿಯುತ್ತಿಲ್ಲ. ಸಂಸದರು, ಸಚಿವರು, ಬೀದರ್‌ ಜಿಲ್ಲೆಯ ಮುಖಂಡರು ಸೇರಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾಗದವರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

‘ಬಿಜೆಪಿ ಸರ್ವಸಮ್ಮತದಿಂದ ಗೆಲ್ಲುವ ಕುದುರೆಯನ್ನು ಆಯ್ಕೆ ಮಾಡಲಿದೆ. ವಿಜಯೇಂದ್ರ ಅಭ್ಯರ್ಥಿ ಅಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ ಕಟಿಲ್‌ ಅವರು ಕೊಡುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ’ ಎಂದರು.

‘ಶಿರಾ ಉಪ ಚುನಾವಣೆಯಲ್ಲಿ ನಡೆದಂತೆ ಬಸವಕಲ್ಯಾಣದಲ್ಲೂ ಬಿಜೆಪಿ ಮ್ಯಾಜಿಕ್‌ ಮಾಡಲಿದೆ. ವ್ಯಕ್ತಿ ಕೇಂದ್ರಿಕೃತ ದೆಹಲಿ ನಾಯಕರಿಂದ ನಡೆಯುವ ಪಕ್ಷ ನಮ್ಮದಲ್ಲ. ಬಿಜೆಪಿ ಕಾರ್ಯಕರ್ತರಿಂದ ನಡೆಯುವ ಪಕ್ಷವಾಗಿದೆ’ ಎಂದು ತಿಳಿಸಿದರು.

‘ಬಸವಾದಿ ಶರಣರ ಕುರುಹಾದ ಅನುಭವ ಮಂಟಪಕ್ಕೆ ಯಡಿಯೂರಪ್ಪ ಅವರು ₹ 500 ಕೋಟಿ ಅನುದಾನ ಒದಗಿಸಿದ್ದು, ಕಟ್ಟಡ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಹೇಳಿದರು.

ಮರಾಠಾ ಸಮಾಜದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಮರಾಠಾ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಲು ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹಾಗೂ ಸಂಸದ ಭಗವಂತ ಖೂಬಾ ಪೂರ್ವ ನಿರ್ಧಾರಿತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಬಸವಕಲ್ಯಾಣದಲ್ಲಿ ವಿಜಯೇಂದ್ರ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.