ADVERTISEMENT

ಚಂದ್ರಯಾನ ನೋಡಲು ಬಂದ ಮೋದಿ ನೆರೆ ಪರಿಸ್ಥಿತಿ ನೋಡಲಿಲ್ಲ: ಈಶ್ವರ ಖಂಡ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 13:35 IST
Last Updated 28 ಸೆಪ್ಟೆಂಬರ್ 2019, 13:35 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ‘ನೆರೆ ಹಾವಳಿ, ಬರದಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದರೂ ಕೇಂದ್ರ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು.

‘ರಾಜ್ಯದ ಜನತೆ ಕೇಂದ್ರ ಸರ್ಕಾರದ ಮೇಲೆ ಭರವಸೆ ಇಟ್ಟು 25 ಸಂಸದರನ್ನು ಗೆಲ್ಲಿಸಿ ಕಳಿಸಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವೈಮಾನಿಕ ಸಮೀಕ್ಷೆ ನಡೆಸಿ ಹೋದರೂ ರಾಜ್ಯದ ನೆರವಿಗೆ ಬಂದಿಲ್ಲ’ ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘2008ರಲ್ಲಿ ಕಾಂಗ್ರೆಸ್‌ ಆರಂಭಿಸಿದ್ದ ಚಂದ್ರಯಾನ ವೀಕ್ಷಣೆಗೆ ಈಚೆಗೆ ರಾಜ್ಯಕ್ಕೆ ಬಂದಿದ್ದ ಮೋದಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಸಮಯ ಕೊಡಲಿಲ್ಲ. ಪ್ರವಾಹ ಬಂದು 60 ದಿನಗಳು ಕಳೆದಿವೆ. ದಿನವೊಂದಕ್ಕೆ ₹ 10 ಸಾವಿರ ಟಿಎ,ಡಿಎ ಪಡೆಯುವ ಹಿರಿಯ ಸಚಿವರು ನೆರೆ ಸಂತ್ರಸ್ತರಿಗೆ ₹ 10 ಸಾವಿರ ಕೊಟ್ಟಿದ್ದೇ ಜಾಸ್ತಿ ಆಯಿತೆಂದು ಹೇಳುತ್ತಿದ್ದಾರೆ. ಇದು ಅವರ ಭಂಡತನಕ್ಕೆ ಸಾಕ್ಷಿಯಾಗಿದೆ’ ಎಂದು ಈಶ್ವರಪ್ಪ ಹೆಸರು ಪ್ರಸ್ತಾಪಿಸದೇ ಟೀಕಿಸಿದರು.

ADVERTISEMENT

‘ಸಂಸದ ತೇಜಸ್ವಿ ಸೂರ್ಯ ಅವರು ನೆರೆ ಪರಿಹಾರಕ್ಕೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ಅನುದಾನ ಅಗತ್ಯ ಇಲ್ಲ ಎಂದು ಹೇಳುತ್ತಿದ್ದಾರೆ. ಇವರು ರಾಜ್ಯದಿಂದ ಆಯ್ಕೆಯಾಗಿ ಹೋಗಿದ್ದಾರೆಯೋ, ಮೇಲಿನಿಂದ ಬಂದಿದ್ದಾರೋ’ ಎಂದು ಪ್ರಶ್ನಿಸಿದರು. ‘ಹಿಂದೆ ರಾಜ್ಯದಲ್ಲಿ ಕಡಿಮೆ ಪ್ರಮಾಣದಲ್ಲಿ ನೆರೆ ಹಾವಳಿ ಬಂದರೂ ಪ್ರಧಾನಿ ಮನಮೋಹನ್‌ ಸಿಂಗ್ ಅವರು ₹1,600 ಕೋಟಿ ಬಿಡುಗಡೆ ಮಾಡಿದ್ದರು’ ಎಂದು ತಿಳಿಸಿದರು.

‘ಅಮೆರಿಕದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ದೇಶದ ಎಲ್ಲ 130 ಕೋಟಿ ಜನ ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ. ಇಲ್ಲಿಯ ನೆರೆ ಸಂತ್ರಸ್ತರು ಹೇಗಿದ್ದಾರೆ ಎನ್ನುವುದನ್ನೂ ಹೇಳಬೇಕಿತ್ತು’ ಎಂದು ಟೀಕಿಸಿದರು.
‘ಕಾಂಗ್ರೆಸ್‌ ಪಕ್ಷ ರಾಜ್ಯದ ಅನೇಕ ಕಡೆ ತಂಡಗಳನ್ನು ಕಳಿಸಿ ₹ 1 ಲಕ್ಷ ಕೋಟಿ ಮೊತ್ತದಷ್ಟು ಹಾನಿಯಾಗಿರುವುದನ್ನು ಗುರುತಿಸಿದೆ. ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ತಲಾ ₹ 10 ಲಕ್ಷ ಕೊಡಬೇಕು. ರೈತರಿಗೆ ಎಕರೆಗೆ ₹ 50 ಸಾವಿರ ಪರಿಹಾರ ಕೊಡಬೇಕೆಂದು ಈಗಾಗಲೇ ಒತ್ತಾಯಿಸಿದೆ’ ಎಂದರು.

‘ರಾಜ್ಯದ 22 ಜಿಲ್ಲೆ ಹಾಗೂ 130 ತಾಲ್ಲೂಕುಗಳಲ್ಲಿ ಪ್ರವಾಹ ಬಂದು ನೂರಾರು ಜನ, ಸಾವಿರಾರು ಜಾನುವಾರು ಮೃತಪಟ್ಟಿವೆ. ಸಾವಿರಾರು ಹಳ್ಳಿಗಳು ಜಲಾವೃತಗೊಂಡು 2,500 ಮನೆಗಳು ಕುಸಿದಿವೆ’ ಎಂದು ತಿಳಿಸಿದರು.

‘25 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ರೈತರು ಮನೆ ಮಠ, ಕೃಷಿ ಉಪಕರಣಗಳನ್ನು ಕಳೆದುಕೊಂಡಿದ್ದಾರೆ. ಯಡಿಯೂರಪ್ಪ ಅವರು ಸಂತ್ರಸ್ತರಿಗೆ ಪರಿಹಾರ ಕೊಡಲಾಗದ್ದಕ್ಕೆ ಬೆಳಗಾವಿ ಬದಲು ಬೆಂಗಳೂರಲ್ಲಿ ಮೂರು ದಿನ ಅಧಿವೇಶನ ಕರೆದಿದ್ದಾರೆ. ಜನರ ಆಕ್ರೋಶ ತಡೆಯಲು ಅಧಿವೇಶನದ ಸ್ಥಳ ಬದಲಾವಣೆ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಕೇವಲ ಮೂರು ದಿನಗಳಲ್ಲಿ ನಾಡಿನ ಸಮಸ್ಯೆಗಳನ್ನು ಚರ್ಚಿಸಲು ಸಾಧ್ಯವೆ?, ಉತ್ತರ ಕರ್ನಾಟಕ ಜನರ ಹಾಗೂ ಸಂತ್ರಸ್ತರ ಸಮಸ್ಯೆ ಅರಿತುಕೊಳ್ಳಲು ಕನಿಷ್ಠ ಒಂದು ತಿಂಗಳು ಅಧಿವೇಶನ ನಡೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.