ಬಸವಕಲ್ಯಾಣ: ನಗರದಿಂದ ಗೌರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿರುವ ಸೇತುವೆಯ ಸ್ಥಳಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಶುಕ್ರವಾರ ಭೇಟಿ ನೀಡಿ, ‘ಕಳಪೆ ಕಾಮಗಾರಿಯ ಕಾರಣ ಅನಾಹುತ ಸಂಭವಿಸಿದೆ’ ಎಂದು ಆರೋಪಿಸಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಡಾಂಬರ್ ಸುರಿಯದೆ ಬರೀ ಎಂಥದ್ದೋ ಎಣ್ಣೆ ಹಾಕಲಾಗುತ್ತಿದೆ ಎಂದು ಗ್ರಾಮದ ಮುಖಂಡರು ದೂರಿದ್ದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಪರಿಶೀಲಿಸಿದ ಅವರು, ಕಾಲಿನಿಂದ ರಸ್ತೆಗೆ ಒದ್ದರೆ ಎಲ್ಲವೂ ಕಿತ್ತುಕೊಂಡು ಬರುತ್ತಿದೆ. ಇಂಥ ಕೆಲಸ ಮಾಡಲು ನಾಚಿಕೆ ಆಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಚ್ಚಿಕೊಂಡು ಹೋಗಿರುವ ಸೇತುವೆಯ ಕಾಮಗಾರಿ ಕ್ರಿಯಾ ಯೋಜನೆಯಲ್ಲಿ ಇಲ್ಲ ಎನ್ನುತ್ತಿರಿ, ಮತ್ತೇಕೆ ಕೆಲಸ ಕೈಗೊಂಡಿದ್ದೀರಿ. ತುರ್ತು ಇದೆ ಎಂದ ಮಾತ್ರಕ್ಕೆ ಲೋಕೋಪಯೋಗಿ ಇಲಾಖೆ ಕೆಲಸಕ್ಕೆ ನೀವೇಕೆ ಹಣ ಹಾಕಬೇಕು. ತಕ್ಷಣ ಕೆಲಸ ನಿಲ್ಲಿಸಿ. ಕಳಪೆ ಕಾಮಗಾರಿ ನಡೆಸಿದ್ದೀರಿ. ಮಣ್ಣು ಕೊಚ್ಚಿಕೊಂಡು ಹೋಗುತ್ತಿದ್ದಾಗ ಯಾರದ್ದಾದರೂ ಜೀವಕ್ಕೆ ಹಾನಿ ಆಗಿದ್ದರೆ ಏನು ಮಾಡಬೇಕಾಗಿತ್ತು. ಇಂಥ ಕೆಲಸ ಮಾಡಿದವರ ವಿರುದ್ಧ ಗ್ರಾಮಸ್ಥರು ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಅವರು ಸಿಟ್ಟಾದರು.
ನಗರಸಭೆ ಅಧ್ಯಕ್ಷ ಸಗೀರುದ್ದೀನ್, ಲೋಕೋಪಯೋಗಿ ಇಲಾಖೆ ಎಇಇ ಧನರಾಜ್ ಚವಾಣ್ ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.