ADVERTISEMENT

ಕೊರೊನಾ ಜಾಗೃತಿಗೆ ಮನೆ ಮನೆಗೆ ಕರಪತ್ರ

ಕೋವಿಡ್‌–19 ವೈರಸ್‌ ಭಯ ನಿವಾರಿಸಿಕೊಳ್ಳಲು ದೂರವಾಣಿ ಕರೆಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 19:30 IST
Last Updated 19 ಮಾರ್ಚ್ 2020, 19:30 IST
 ಡಾ.ವಿ.ಜಿ.ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ
 ಡಾ.ವಿ.ಜಿ.ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ   

ಬೀದರ್‌: ಇಲ್ಲಿಯ ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಅವರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಒಂದೂವರೆ ಗಂಟೆ ವರೆಗೆ ಬಿಟ್ಟು ಬಿಡದಂತೆ ಫೋನ್‌ಗಳು ರಿಂಗಣಿಸಿದವು.

ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್‌– 19 ಸೋಂಕಿಗೆ ಸಂಬಂಧಿಸಿದಂತೆ ಬೀದರ್‌ ಜಿಲ್ಲೆ ಅಷ್ಟೇ ಅಲ್ಲ; ನೆರೆಯ ತೆಲಂಗಾಣದಿಂದಲೂ ಫೋನ್‌ ಕರೆಗಳು ಬಂದವು.

ಕೆಲವರು ಮನೆಯಿಂದ ಹೊರಗೆ ಬರಬೇಕೆ? ಅಥವಾ ಬೇಡವೆ? ಎಂದು ಕೇಳಿದರೆ, ಇನ್ನು ಕೆಲವರು ನಾವು ಎಷ್ಟುದಿನ ಮನೆಯಲ್ಲಿ ಇರಬೇಕು ಎಂದು ಪ್ರಶ್ನಿಸಿದರು. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಇರುವುದರಿಂದ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಏನು ಮಾಡಬೇಕು ಎನ್ನುವ ಕುರಿತು ಮಾರ್ಗದರ್ಶನ ಕೊಡಿ ಎಂದು ಗೃಹಿಣಿಯರು ಮನವಿ ಮಾಡಿದರು.

ADVERTISEMENT

ಆರೋಗ್ಯ ಇಲಾಖೆ ನಗರ ಕೇಂದ್ರೀತವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಗ್ರಾಮೀಣ ಪ್ರದೇಶದವರಿಗೆ ಕೊರೊನಾ ವೈರಸ್‌ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲ. ಹಳ್ಳಿಯ ಜನರಿಗೆ ಸೋಂಕಿನ ಅಪಾಯದ ಬಗ್ಗೆ ತಿಳಿವಳಿಕೆ ನೀಡಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಎಂದು ಅನೇಕ ಗ್ರಾಮಗಳ ಜನರು ಡಿಎಚ್‌ಒ ಅವರಿಗೆ ಮನವಿ ಮಾಡಿದರು.

ಜಿಲ್ಲೆಯ ಯಾರೊಬ್ಬರಿಗೂ ಕೋವಿಡ್‌ 19 ಸೋಂಕು ತಗುಲಿಲ್ಲ. ವಿದೇಶದಿಂದ ಬಂದಿರುವ ಎಲ್ಲ ವ್ಯಕ್ತಿಗಳ ಆರೋಗ್ಯ ತಪಾಸಣೆ ನಡೆಸಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅವರ ಮೇಲೆ 14 ದಿನಗಳ ವರೆಗೆ ನಿಗಾ ಇಡಲಾಗಿದೆ. ಸಾರ್ವಜನಿಕರು ಎರಡು ವಾರ ಹೊರಗಿನ ಕಾರ್ಯಕ್ರಮಗಳನ್ನು ಮುಂದೂಡುವುದು ಒಳಿತು. ಮದುವೆ, ಶಾಲು ಕಿರುಗುಣಿ, ಸಭೆ, ಸಮಾರಂಭ ಹಾಗೂ ಸಾಮೂಹಿಕ ಪ್ರಾರ್ಥನೆಗಳಲ್ಲೂ ಪಾಲ್ಗೊಳ್ಳುವುದು ಬೇಡ ಎಂದು ಡಾ. ವಿ.ಜಿ. ರೆಡ್ಡಿ ಅವರು ಸಲಹೆ ನೀಡಿದರು.

* * *
ಫೋನ್‌ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕೇಳಿದ ಕೆಲ ಆಯ್ದ ಪ್ರಶ್ನೆಗಳು ಹಾಗೂ ಡಿಎಚ್‌ಒ ಅವರು ನೀಡಿದ ಉತ್ತರ ಇಲ್ಲಿವೆ.

* ಬೀದರ್‌ ತಾಲ್ಲೂಕಿನ ಚಿಲ್ಲರ್ಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24X7 ಸಿಬ್ಬಂದಿ ನಿಯೋಜಿಸಿದ್ದರೂ ರಾತ್ರಿ ವೇಳೆಯಲ್ಲಿ ಯಾರೂ ಇರುತ್ತಿಲ್ಲ. ಹೆರಿಗೆಗೆ ಬರುವ ಗರ್ಭಿಣಿಯರು ಬೀದರ್‌ಗೆ ಹೋಗುವ ಪರಿಸ್ಥಿತಿ ಇದೆ. ಆರೋಗ್ಯ ಇಲಾಖೆಯಿಂದ ಯಾವ ಕ್ರಮಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ಕೊಡಿ.


ಶ್ರೀನಿವಾಸ ರೆಡ್ಡಿ
ಬೀದರ್‌ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

ಜಿಲ್ಲೆಯಲ್ಲಿ ಹೆಲ್ತ್‌ ಎಮರ್ಜೆನ್ಸಿ ಘೋಷಿಸಲಾಗಿದೆ. ವೈದ್ಯರು ಕೇಂದ್ರ ಸ್ಥಾನದಲ್ಲಿಯೇ ಉಳಿದು ಕೆಲಸ ಮಾಡಬೇಕು. ಚಿಲ್ಲರ್ಗಿಯಲ್ಲಿದ್ದ ಒಬ್ಬರು ಹಿರಿಯ ಸ್ಟಾಫ್‌ ನರ್ಸ್‌ ಕೆಲಸ ಬಿಟ್ಟು ಹೋಗಿದ್ದಾರೆ. ಅಲ್ಲಿನ ಸಮಸ್ಯೆಯನ್ನು ಶೀಘ್ರ ಇತ್ಯರ್ಥಗೊಳಿಸಲಾಗುವುದು ಎಂದು ಡಾ.ವಿ.ಜಿ.ರೆಡ್ಡಿ ಉತ್ತರಿಸಿದರು.


* ಜಿಲ್ಲಾಡಳಿತ ರಸ್ತೆ ಬದಿಯ ಚಹಾ ಅಂಗಡಿಗಳನ್ನು ಬಂದ್‌ ಮಾಡಿಸಿದೆ. ಪಾನ್‌ ಬೀಡಾ ಅಂಗಡಿ, ಐಸ್‌ಕ್ರಿಮ್‌ ಅಂಗಡಿಗಳಿಗೆ ಅನುಮತಿ ಕೊಟ್ಟಿದೆ. ಗುಟ್ಕಾ ತಿಂದು ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಆರೋಗ್ಯ ಸಮಸ್ಯೆಯಾಗುವುದಿಲ್ಲವೆ?

ಬಸವರಾಜ್, ಔರಾದ್‌ ತಾಲ್ಲೂಕು ಗುಡಪಳ್ಳಿಯ ನಿವಾಸಿ


ಅಂಗಡಿಗಳನ್ನು ಮುಚ್ಚಿಸುವ ನಿರ್ಧಾರ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಬಿಟ್ಟ ವಿಚಾರವಾಗಿದೆ.

* ಕಮಠಾಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇರುವುದಿಲ್ಲ. ಅಲ್ಲಿ ರೋಗಿಗಳಿಗೆ ಔಷಧಿಯನ್ನೂ ಕೊಡುತ್ತಿಲ್ಲ. ಇಲ್ಲಿಯ ಜನ ಏನು ಮಾಡಬೇಕು?

ಬಸಯ್ಯ ಸ್ವಾಮಿ ಹಾಗೂ ನಟರಾಜ್‌, ಕಮಠಾಣ ನಿವಾಸಿಗಳು

ಹಿಂದೆ ಅಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಅಲ್ಲಿನ ಆಂಬುಲೆನ್ಸ್‌ ದುರಸ್ತಿ ಪಡಿಸಲಾಗಿದೆ. ಇದೀಗ ಇಬ್ಬರು ವೈದ್ಯರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರಿಂದ ದೂರು ಬರುತ್ತಿರುವ ಕಾರಣ ಅನಿರೀಕ್ಷಿತ ಭೇಟಿ ಕೊಟ್ಟು ಪರಿಶೀಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು

* ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಕ್ಕಳು ಹಾಗೂ ಹಿರಿಯರಿಗೆ ಯಾವ ಆಹಾರ ಕೊಡಬೇಕು?

ಸುಜಾತಾ ಮಾನಶೆಟ್ಟಿ, ಗೃಹಿಣಿ, ಬೀದರ್


ಸದ್ಯಕ್ಕೆ ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗುವುದು ಬೇಡ. ಹಣ್ಣುಗಳನ್ನು ಹೆಚ್ಚು ಹೆಚ್ಚು ತಿನ್ನಬೇಕು. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು.

* ಅಧಿಕಾರಿಗಳು ಕಚೇರಿಗಳಲ್ಲಿ ಸಭೆ ನಡೆಸಿದರೆ ಸಾಲದು. ಗ್ರಾಮೀಣ ಪ್ರದೇಶದಲ್ಲೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಇದಕ್ಕಾಗಿ ಏನು ಮಾಡುತ್ತೀದ್ದಿರಿ?

ಅನಿಲ ಜಿರೋಬೆ , ಔರಾದ್‌ನ ಸಾಮಾಜಿಕ ಕಾರ್ಯಕರ್ತ

‘ಆರೋಗ್ಯ ಇಲಾಖೆಯಿಂದ ಎಲ್ಲ ಕಡೆ ಪೋಸ್ಟರ್‌ ಅಳವಡಿಸುವ ಕಾರ್ಯ ಮುಂದುವರಿದಿದೆ. ಕರಪತ್ರಗಳನ್ನೂ ಮುದ್ರಿಸಲಾಗಿದ್ದು, ಎರಡು ದಿನಗಳಲ್ಲಿ ಆಶಾ ಕಾರ್ಯಕಾರ್ತರು ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ತಿಳಿವಳಿಕೆ ನೀಡಲಿದ್ದಾರೆ. ಧ್ವನಿವರ್ಧಕಗಳ ಮೂಲಕವೂ ಸಾರ್ವಜನಿಕರಿಗೆ ಕೋವಿಡ್‌ 19 ತಿಳಿವಳಿಕೆ ನೀಡಲಾಗುತ್ತಿದೆ

ಫೋನ್‌ಇನ್‌ಗೆ ತೆಲಂಗಾಣದ ಕರೆಗಳು
ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ತೆಲಂಗಾಣದ ಜಹೀರಾಬಾದ್‌ನಲ್ಲಿ ವಾಸವಾಗಿರುವ ಕನ್ನಡಿಗರೂ ಸಹ ‘ಪ್ರಜಾವಾಣಿ’ ಆಯೋಜಿಸಿದ್ದ ಫೋನ್‌ಇನ್‌ನಲ್ಲಿ ಪ್ರಶ್ನೆಗಳನ್ನು ಕೇಳಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

‘ನಮ್ಮ ಮನೆಯವರು ನಿತ್ಯ ಬಸ್‌ನಲ್ಲಿ ಜಹೀರಾಬಾದ್‌ನಿಂದ ಹೈದರಾಬಾದ್‌ಗೆ ಹೋಗಿ ಬರುತ್ತಿದ್ದಾರೆ. ಬಸ್‌ನಲ್ಲಿ ಅನೇಕ ಜನ ಪ್ರಯಾಣಿಸುವುದರಿಂದ ಕೋವಿಡ್‌ 19 ಸೋಂಕು ತಗಲುವ ಸಾಧ್ಯತೆ ಇದೆಯೇ ಎಂದು ಜಹೀರಾಬಾದ್‌ನ ಧನಶ್ರೀ ಪ್ರಶ್ನಿಸಿದರು.

‘ಬಸ್‌ನಲ್ಲಿ ಪ್ರಯಾಣಿಸುವವರು ಮಾಸ್ಕ್‌ ಹಾಕಿಕೊಳ್ಳುವುದು ಒಳ್ಳೆಯದು. ಬಸ್‌ನಲ್ಲಿ ಹಿಡಿಕೆ ಹಿಡಿಯುವುದನ್ನು ಆದಷ್ಟು ತಪ್ಪಿಸುವುದು ಸೂಕ್ತ. ಮನೆಗೆ ಬಂದ ತಕ್ಷಣ ಸೋಪಿನಿಂದ ಚೆನ್ನಾಗಿ ಕೈತೊಳೆದುಕೊಳ್ಳಬೇಕು. ಕೆಮ್ಮು ಇರುವವರಿಂದ ಆದಷ್ಟು ದೂರ ಇರಬೇಕು. ನಮ್ಮ ಆರೋಗ್ಯದ ಕಾಳಜಿ ನಾವೇ ವಹಿಸಿಕೊಂಡರೆ ಯಾವ ಸೋಂಕು ಸಹ ನಮ್ಮ ಹತ್ತಿರ ಸುಳಿಯದು’ ಎಂದು ಡಾ.ರೆಡ್ಡಿ ಧೈರ್ಯ ತುಂಬಿದರು.

ಕರ್ತವ್ಯ ನಿರ್ವಹಿಸದ ವೈದ್ಯರ ವಿರುದ್ಧ ಕ್ರಮಕೈಗೊಳ್ಳಿ
ಕಮಠಾಣ, ಚಿಲ್ಲರ್ಗಿ, ಠಾಣಾಕುಶನೂರಿನಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾರ್ವಜನಿಕರಿಗೆ ಸರಿಯಾಗಿ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಾತ್ರೆಗಳನ್ನೂ ಕೊಡುತ್ತಿಲ್ಲ. ಇಲ್ಲಿಯ ವೈದ್ಯರ ವಿರುದ್ಧ ಕ್ರಮೈಗೊಳ್ಳಿ ಇಲ್ಲವೇ ಬೇರೆ ವೈದ್ಯರನ್ನು ನಿಯೋಜಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.

‘ಜಿಲ್ಲಾಧಿಕಾರಿ 144 (3) ಪ್ರಕಾರ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ. ವೈದ್ಯರು ತಮ್ಮ ಸೇವೆಯಿಂದ ಯಾವ ಕಾರಣಕ್ಕೂ ವಿಮುಖವಾಗುವಂತಿಲ್ಲ. ಸಾರ್ವಜನಿಕರಿಗೆ ಸರಿಯಾಗಿ ಸೇವೆ ಕೊಡದ ವೈದ್ಯರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು’ ಎಂದು ಡಾ.ವಿ.ಜಿ.ರೆಡ್ಡಿ ತಿಳಿಸಿದರು.

ಬ್ರ್ಯಾಂಡಿ ಸೇವಿಸಿದರೆ ಸೋಂಕು ಹೋಗುತ್ತಾ?
ಅಲ್ಕೋಹಾಲ್‌ನಿಂದ ಕೈತೊಳೆದುಕೊಂಡರೆ ಸೋಂಕು ಹತ್ತಿರವೂ ಸುಳಿಯುವುದಿಲ್ಲ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾನು ಯಾವಾಗಲಾದರೂ ಒಮ್ಮೆ ಮದ್ಯ ಸೇವಿಸುತ್ತೇನೆ. ಬ್ರ್ಯಾಂಡಿ ಸೇವಿಸಿದರೆ ಸೋಂಕು ಹೋಗುತ್ತಾ ಎಂದು ಔರಾದ್‌ ತಾಲ್ಲೂಕಿನ ನಂದ್ಯಾಳದ ಮೊಗಲಪ್ಪ ಕೇಳಿದರು.

‘ಮದ್ಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಬ್ರ್ಯಾಂಡಿ ಸೇವನೆಯಿಂದ ಸೋಂಕು ದೂರಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಬಟ್ಟೆ ತೊಳೆಯುವ ಸೋಪಿನಿಂದ ದಿನಕ್ಕೆ ನಾಲ್ಕು ಬಾರಿ ಚೆನ್ನಾಗಿ ಕೈತೊಳೆದುಕೊಂಡರೂ ಸಾಕು. ಒಟ್ಟಾರೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಮ್ಮುವವರಿಂದ ಆದಷ್ಟು ದೂರ ಇರಬೇಕು. ಜನಸಮೂಹದಲ್ಲಿದ್ದರೆ ಮುಖಕ್ಕೆ ರುಮಾಲು ಕಟ್ಟಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸೋಂಕು ಬರದು ಎಂದು ತಿಳಿಸಿದರು.

ಬೇಕರಿ ತಿನಿಸುಗಳಿಂದ ಸೋಂಕು ಹರಡುತ್ತದೆಯೇ?
ಬೇಕರಿ ತಿನಿಸುಗಳಿಂದ ಕೋವಿಡ್ 19 ಸೋಂಕು ಹರಡುತ್ತದೆಯೇ? ನಗರಸಭೆಯವರು ಬೇಕರಿಗಳನ್ನೂ ಬಂದ್‌ ಮಾಡಿಸುತ್ತಿದ್ದಾರಲ್ಲ ಎಂದು ಹಮಿಲಾಪುರದ ನಿವಾಸಿ ಆಕಾಶ ಬಿ. ಪ್ರಶ್ನಿಸಿದರು.

ಬೇಕರಿ ತಿನಿಸುಗಳಿಂದ ಸೋಂಕು ಹರಡದು. ಆದರೆ, ಪಪ್ಸ್‌ ಇನ್ನಿತರ ಕರಿದ ಪದಾರ್ಥ ಹಾಗೂ ಡಾಲ್ಡಾ ಯುಕ್ತ ಪದಾರ್ಥಗಳ ಸೇವನೆ ಸರಿಯಲ್ಲ. ಬ್ರೆಡ್‌, ಪಾವ್ ಹಾಗೂ ಟೋಸ್ಟ್‌ ಸೇವಿಸಬಹುದಾಗಿದೆ. ವೈದ್ಯರ ಸಲಹೆಯಂತೆ ರೋಗಿಗಳಿಗೆ ಬ್ರೆಡ್‌ ಕೊಡಬಹುದಾಗಿದೆ ಎಂದು ಡಿಎಚ್‌ಒ ಸ್ಪಷ್ಟಪಡಿಸಿದರು.

ರೇಬಿಸ್‌ ರೋಗ ನಿರೋಧಕ ಚುಚ್ಚುಮದ್ದು ಇಲ್ಲ
ನಾಯಿ ಕಚ್ಚಿದ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಲ್ಕು ತಿಂಗಳಿಂದ ರೋಗ ನಿರೋಧಕ ಚುಚ್ಚುಮದ್ದು ಇಲ್ಲ. ಎಲ್ಲ ಆಸ್ಪತ್ರೆಗಳಲ್ಲೂ ರೇಬಿಸ್‌ ರೋಗ ನಿರೋಧಕ ಚುಚ್ಚುಮದ್ದು ದೊರೆಯುವಂತೆ ಮಾಡಬೇಕು ಎಂದು ಬ್ಯಾಲಹಳ್ಳಿಯ ನಿರ್ಮಲಕಾಂತ ಪಾಟೀಲ ಮನವಿ ಮಾಡಿದರು.

ತಾಂತ್ರಿಕ ಕಾರಣದಿಂದ ನಾಲ್ಕು ತಿಂಗಳಿಂದ ಔಷಧ ಬಂದಿರಲಿಲ್ಲ. ಆದರೆ, ಇದೀಗ ಎಲ್ಲ ಆಸ್ಪತ್ರೆಗಳಲ್ಲಿ ನಾಯಿ ಕಚ್ಚಿದ ವ್ಯಕ್ತಿಗಳಿಗೆ ರೋಗ ನಿರೋಧಕ ಚುಚ್ಚುಮದ್ದಿನ ವ್ಯವಸ್ಥೆ ಮಾಡಲಾಗಿದೆ ಎಂದು ಡಿಎಚ್ಒ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.