ADVERTISEMENT

ಎಲ್ಲ ಹಳ್ಳಿಗಳ ಅಭಿವೃದ್ಧಿಗೂ ಒತ್ತು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 14:09 IST
Last Updated 12 ಏಪ್ರಿಲ್ 2021, 14:09 IST
ಬಸವಕಲ್ಯಾಣ ತಾಲ್ಲೂಕಿನ ಲಾಡವಂತಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಪ್ರಚಾರ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು
ಬಸವಕಲ್ಯಾಣ ತಾಲ್ಲೂಕಿನ ಲಾಡವಂತಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಪ್ರಚಾರ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು   

ಲಾಡವಂತಿ (ಬೀದರ್‌ ಜಿಲ್ಲೆ): ‘ವಿಶ್ವದ ಗಮನ ಸೆಳೆಯುವ ರೀತಿಯಲ್ಲಿ ಬಸವಕಲ್ಯಾಣದ ಅಭಿವೃದ್ಧಿ ಮಾಡಲಾಗುವುದು. ಈ ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳ ಅಭಿವೃದ್ಧಿಗೂ ಒತ್ತು ಕೊಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಯುಕ್ತ ಬಸವಕಲ್ಯಾಣ ತಾಲ್ಲೂಕಿನ ಲಾಡವಂತಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆ ಮುಗಿದ ಬಳಿಕ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವಸತಿ ಸಚಿವ ಸೋಮಣ್ಣ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹಾಗ ಸಂಸದರೊಂದಿಗೆ ಸಭೆ ನಡೆಸಲಾಗುವುದು. ನೂತನ ಶಾಸಕರಾಗಲಿರುವ ಶರಣು ಸಲಗರ ಜತೆಯೂ ಸಮಾಲೋಚನೆ ನಡೆಸಿ ಜನರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

`ರಾಜ್ಯದಲ್ಲಿ ಇದಕ್ಕೂ ಮುಂಚೆ ನಡೆದ ವಿಧಾನಸಭೆ ಕ್ಷೇತ್ರಗಳ 15 ಉಪ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವೆ ಈಗ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆಯ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ.
ಅದರಲ್ಲಿ ಸಂಶಯವೇ ಬೇಡ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಸವಕಲ್ಯಾಣದ ಅನುಭವ ಮಂಟಪಕ್ಕೆ ₹ 500 ಕೋಟಿ ಪೈಕಿ ₹ 200 ಕೋಟಿ ಬಿಡುಗಡೆ ಮಾಡಲಾಗಿದೆ, ಸಮಗ್ರ ಅಭಿವೃದ್ಧಿ ಕೈಗೊಂಡು ಇದನ್ನು ಅಂತರ ರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು’ ಎಂದು ತಿಳಿಸಿದರು.

‘ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಿ ₹ 1,500 ಕೋಟಿ ಕೊಡಲಾಗಿದೆ. ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ನಂಜುಂಡಪ್ಪ ವರದಿ ಅನ್ವಯ ₹ 3 ಸಾವಿರ ಕೋಟಿ ಕೊಡಲಾಗಿದೆ, ಈಗಾಗಲೇ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು. ಲಾಡವಂತಿ ಗ್ರಾಮಸ್ಥರು 16 ಬೇಡಿಕೆಗಳ ಈಡೇರಿಕೆಗೆ ಮನವಿ ಕೊಟ್ಟಿದ್ದಾರೆ. ಸಾಧ್ಯವಿರುವ ಬೇಡಿಕೆಗಳನ್ನು ಈಡೇರಿಸಲಾಗುವುದು. ನನ್ನ ಜೀವನದಲ್ಲಿ ಸುಳ್ಳು ಭರವಸೆ ಕೊಟ್ಟಿಲ್ಲ. ದೇವರು ಮೆಚ್ಚುವ ರೀತಿಯಲ್ಲಿ ನಡೆದುಕೊಂಡು ಬಂದಿದ್ದೇನೆ. ಹೇಳಿದ್ದನ್ನು ನೂರಕ್ಕೆ ನೂರಷ್ಟು ಕೆಲಸ ಮಾಡಿದ್ದೇನೆ’ ಎಂದರು.

‘ಹಿಂದೂ ಮುಸ್ಲಿಂ, ಕ್ರಿಶ್ಚನ್‌ ಎನ್ನುವ ಭೇಧ ನನಗೆ ಇಲ್ಲ. ಎಲ್ಲರೂ ಒಂದೇ ತಿಳಿದುಕೊಂಡಿದ್ದೇನೆ. ಚುನಾವಣಾ ಫಲಿತಾಂಶ ಬಂದ ಮೇಲೆ ಹಣ ಬಿಡುಗಡೆ ಮಾಡಿ ಎಲ್ಲ ಕೆಲಸ ಮಾಡಿಕೊಡುತ್ತೇನೆ. ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮತದಾರರಿಗೆ ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮಾತನಾಡಿದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಪಶು ಸಂಗೋ‍ಪನಾ ಸಚಿವ ಪ್ರಭು ಚವಾಣ್‌, ಸಂಸದ ಭಗವಂತ ಖೂಬಾ.ಶಾಸಕ ರಾಜೀವ್, ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಮಾರುತಿರಾವ್ ಮುಳೆ, ಬಾಬುರಾವ್‌ ಚಿಂಚನಸೂರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಲೆ, ವಿಭಾಗ ಪ್ರಮುಖ ಈಶ್ವರಸಿಂಗ್‌ ಠಾಕೂರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.