ADVERTISEMENT

ಬೀದರ್: ಸಮಾನತೆ ಪ್ರತಿಪಾದಿಸಿದ ಬುದ್ಧ, ಬಸವ, ಅಂಬೇಡ್ಕರ್

ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಡಾ. ಬಸವರಾಜ ಪಾಟೀಲ ಅಷ್ಟೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 12:19 IST
Last Updated 1 ಅಕ್ಟೋಬರ್ 2021, 12:19 IST
ಬೀದರ್‌ನ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ’ದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರ ಪೂಜೆ ಸಲ್ಲಿಸಿದರು. ಪ್ರಾಚಾರ್ಯ ದಿಲೀಪ ಗಡ್ಡೆ, ಸುಮನ್‍ಬಾಯಿ ಸಿಂಧೆ, ಸಿದ್ರಾಮ ಸಿಂಧೆ, ಶಿವಕುಮಾರ ಉಪ್ಪೆ ಇದ್ದಾರೆ
ಬೀದರ್‌ನ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ’ದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರ ಪೂಜೆ ಸಲ್ಲಿಸಿದರು. ಪ್ರಾಚಾರ್ಯ ದಿಲೀಪ ಗಡ್ಡೆ, ಸುಮನ್‍ಬಾಯಿ ಸಿಂಧೆ, ಸಿದ್ರಾಮ ಸಿಂಧೆ, ಶಿವಕುಮಾರ ಉಪ್ಪೆ ಇದ್ದಾರೆ   

ಬೀದರ್: ‘ನಾಲ್ಕನೇ ಶತಮಾನದಲ್ಲಿ ಗೌತಮ ಬುದ್ಧ, 12ನೇ ಶತಮಾನದಲ್ಲಿ ಬಸವೇಶ್ವರ ಹಾಗೂ 19ನೇ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ ಪ್ರತಿಪಾದಿಸಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಹೇಳಿದರು.

ಇಲ್ಲಿಯ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣದ ಮೂಲಕ ಪಡೆದ ಜ್ಞಾನವು ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಗೌರವಿಸುವಂತೆ ಮಾಡಿತು. ಅಂಬೇಡ್ಕರರು ದಕ್ಷಿಣ ಏಷ್ಯಾದಲ್ಲೇ ಪಿಎಚ್‍ಡಿ ಪಡೆದ ಮೊದಲಿಗರಾಗಿದ್ದರು. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಕಾನೂನು, ರಾಜಕೀಯ ತಜ್ಞರಾಗಿದ್ದರು. ಎಲ್ಲ ವಿಷಯಗಳ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದರು’ ಎಂದು ತಿಳಿಸಿದರು.

ADVERTISEMENT

‘ಅಂಬೇಡ್ಕರ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಉನ್ನತ ವ್ಯಕ್ತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಲು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದರು.

‘ಅಂಬೇಡ್ಕರ್ ಓದು ಕಾರ್ಯಕ್ರಮವು ಅಂಬೇಡ್ಕರರ ಜೀವನದ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮವಾಗಿದೆ’ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.

‘ಡಾ. ಅಂಬೇಡ್ಕರ್ ಅವರು ಬಡ ಕುಟುಂಬದಲ್ಲಿ ಜನಿಸಿದರೂ, ಶಿಕ್ಷಣದ ಮೂಲಕ ಉತ್ತುಂಗದ ಸ್ಥಾನಕ್ಕೆ ಏರಿದ್ದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸಂವಿಧಾನ ರಚಿಸಿದ್ದರು. ವಿದ್ಯಾರ್ಥಿಗಳು ಅವರ ಜೀವನ ಚರಿತ್ರೆ ಓದಿ, ಸಾಧನೆಗೆ ಪ್ರೇರಣೆ ಪಡೆಯಬೇಕು’ ಎಂದು ಹೇಳಿದರು.

ಪ್ರಾಚಾರ್ಯ ದಿಲೀಪ ಗಡ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಯೋಜಕ ಶರಣಪ್ಪ ಎಸ್.ಎಂ, ಸಿಬ್ಬಂದಿ ಕಾರ್ಯದರ್ಶಿ ಲಕ್ಷ್ಮಣ ಕಾಂಬಳೆ, ಸಹಾಯಕ ಪ್ರಾಧ್ಯಾಪಕರಾದ ಸುಮನ್‍ಬಾಯಿ ಸಿಂಧೆ, ವೀರೇಶ ರಾಂಪುರೆ, ರಾಜಕುಮಾರ ಅಲ್ಲೂರೆ ಉಪಸ್ಥಿತರಿದ್ದರು.

ಡಾ. ಅಂಬೇಡ್ಕರ್ ಅವರ ಬದುಕು-ಬರಹ ಕುರಿತು ಸಹ ಪ್ರಾಧ್ಯಾಪಕ ಡಾ. ಶ್ರೀಕಾಂತ ವಿ. ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ರಘುನಂದಾ ಬಿ., ಅಂಬಿಕಾ ದೇವಿ ನಿರ್ಣಾಯಕರಾಗಿದ್ದರು.

ಜಲಸಂಘ್ವಿಯ ಮಂಜುನಾಥ ಮತ್ತು ತಂಡ ಸುಗಮ ಸಂಗೀತ, ಉಡಮನಳ್ಳಿಯ ಮಂಜುನಾಥ ಹಾಗೂ ತಂಡ ಜಾನಪದ ಗಾಯನ ಹಾಗೂ ಅನಿಲಕುಮಾರ ಮತ್ತು ತಂಡದವರು ದೇಶಭಕ್ತಿ ಗೀತೆ ಪ್ರಸ್ತುತಪಡಿಸಿ ನೆರೆದವರ ಮನಸೂರೆಗೊಂಡರು.

ಬದುಕು ಬರಹ ಕುರಿತು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಕೃತಿಗಳನ್ನು ಬಹುಮಾನ ರೂಪದಲ್ಲಿ ನೀಡಲಾಯಿತು.

ಸಹ ಪ್ರಾಧ್ಯಾಪಕ ಡಾ. ಶಿವಕುಮಾರ ಉಪ್ಪೆ ಸ್ವಾಗತಿಸಿದರು. ಡಾ. ಲಕ್ಷ್ಮೀಕಾಂತ ಪಾಂಚಾಳ ನಿರೂಪಿಸಿದರು.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ 21-22ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ವಿದ್ಯಾಶ್ರೀ ಮಹಿಳಾ ಕಲೆ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.