ಕಮಲನಗರ: ‘ಗೌತಮ ಬುದ್ಧನ ಸಂದೇಶಗಳು ಇಡೀ ಮಾನವ ಕುಲಕ್ಕೆ ಮಾರ್ಗದರ್ಶಿಯಾಗಿವೆ’ ಎಂದು ಭಂತೆ ಧಮ್ಮ ಬೋಧಿ ಹೇಳಿದರು.
ಪಟ್ಟಣದ ಲುಂಬಿಣಿ ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಗೌತಮ ಬುದ್ಧನ ಮೂರ್ತಿ ಪ್ರತಿಷ್ಠಾಪನೆ ಹಾಗೂ ವರ್ಷಾವಾಸ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಗೌತಮ ಬುದ್ಧ ಇಡೀ ವಿಶ್ವದಲ್ಲಿ ಸಹನೆ, ಸಹಬಾಳ್ವೆ, ಸಹೋದರತೆ ಬಿತ್ತಿದರು. ಭಾರತದಲ್ಲಿ ಹುಟ್ಟಿ ಬೆಳೆದ ಗೌತಮ ಬುದ್ಧ ಇಡೀ ವಿಶ್ವದಲ್ಲಿ ಶಾಂತಿಯ ಸಂದೇಶ ಪಸರಿಸಿದ್ದಾರೆ’ ಎಂದರು.
ಲುಂಬಿಣಿ ಬುದ್ಧ ವಿಹಾರದಲ್ಲಿ ಮಧ್ಯಾಹ್ನ 3ಕ್ಕೆ ಭಂತೆ ಧಮ್ಮ ಬೋಧಿ ಹಾಗೂ ಭಂತೆ ಬೋಧಿ ರತ್ನ ಅವರು ಗೌತಮ ಬುದ್ಧನ ಮೂರ್ತಿ ಅನಾವರಣಗೊಳಿಸಿದರು.
ಮೆರವಣಿಗೆ: ಪಟ್ಟಣದ ಸಿದ್ಧಾರ್ಥ ನಗರ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ 11ಕ್ಕೆ ಗೌತಮ ಬುದ್ಧನ ಮೂರ್ತಿ ಮೆರವಣಿಗೆಗೆ ಭಂತೆ ಬೋಧಿ ರತ್ನ ಮತ್ತು ಭಂತೆ ಧಮ್ಮ ಬೋಧಿ ಚಾಲನೆ ನೀಡಿದರು.
ಮೆರವಣಿಗೆಯು ಸಿದ್ಧಾರ್ಥ ನಗರ ಬಡಾವಣೆಯಿಂದ ಆರಂಭಗೊಂಡು ವಿಶ್ವಾಸ ನಗರ, ಹಿಮ್ಮತ ನಗರ, ಬಸವೇಶ್ವರ ವೃತ್ತ, ಗ್ರಾಮ ಪಂಚಾಯಿತಿ ಕಚೇರಿ, ಅಶೋಕ ನಗರ, ನ್ಯೂ ಭೀಮ ನಗರದಿಂದ ಸಾಗಿ ಬಸ್ ನಿಲ್ದಾಣ, ಮಾರ್ಕೆಟ್ ಯಾರ್ಡ್, ರೈಲು ನಿಲ್ದಾಣ ರಸ್ತೆ, ಪಂಚಶೀಲನಗರ ಮಾರ್ಗವಾಗಿ ಸಾಗಿ ಇಂದಿರಾನಗರ ಬಡಾವಣೆಯಲ್ಲಿಯ ಲುಂಬಿಣಿ ಬುದ್ಧ ವಿಹಾರಕ್ಕೆ ಬಂದು ತಲುಪಿತು. ಮೆರವಣಿಗೆಯಲ್ಲಿ ಉಪಾಸಕ ಹಾಗೂ ಉಪಾಸಕಿಯರು, ಮಕ್ಕಳು ಪಾಲ್ಗೊಂಡಿದ್ದರು.
Quote - ವಿಶ್ವಕ್ಕೆ ಶಾಂತಿ ಮತ್ತು ಸರಳ ತತ್ವಗಳನ್ನು ಬೋಧಿಸಿದ ಬುದ್ಧನ ತತ್ವ ಸಿದ್ಧಾಂತಗಳು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಭಂತೆ ಬೋಧಿ ರತ್ನ ಆನಂದ ಬುದ್ಧ ವಿಹಾರ ಧಮ್ಮ ಭೂಮಿ ಹಿಪ್ಪಳಗಾಂವ