ADVERTISEMENT

ಆಕಸ್ಮಿಕ ಬೆಂಕಿಗೆ ತಿಪ್ಪೆಗುಂಡಿಗಳು ಭಸ್ಮ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 12:45 IST
Last Updated 28 ಮಾರ್ಚ್ 2021, 12:45 IST
ಸೋನಾಳ ಗ್ರಾಮದ ಹೊರವಲಯದಲ್ಲಿ ಆಕಸ್ಮಿಕ ಬೆಂಕಿಗೆ ತಿಪ್ಪೆಗುಂಡಿ, ಕೂಡಿಟ್ಟ ಕಟ್ಟಿಗೆಗಳು ಭಸ್ಮವಾಗಿವೆ
ಸೋನಾಳ ಗ್ರಾಮದ ಹೊರವಲಯದಲ್ಲಿ ಆಕಸ್ಮಿಕ ಬೆಂಕಿಗೆ ತಿಪ್ಪೆಗುಂಡಿ, ಕೂಡಿಟ್ಟ ಕಟ್ಟಿಗೆಗಳು ಭಸ್ಮವಾಗಿವೆ   

ಕಮಲನಗರ: ಆಕಸ್ಮಿಕ ಬೆಂಕಿಗೆ ಹತ್ತಾರು ಗೊಬ್ಬರ ತಿಪ್ಪೆಗುಂಡಿಗಳು, ಕಟ್ಟಿಗೆಗಳು, ಬೆರಣಿಗಳು ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಸೋನಾಳ ಗ್ರಾಮದಲ್ಲಿ ಜರುಗಿದೆ.

ಸೋನಾಳ ಗ್ರಾಮದ ಜನರು ಹೊರವಲಯದಲ್ಲಿ ಸಂಗ್ರಹಿಸಲ್ಪಟ್ಟ ತೊಗರಿ ಕಟ್ಟಿಗೆ, ಜೋಳದ ಕಣಕಿ, ಮೇವಿನ ಬಣವಿಗಳು ಕೂಡ ಸಂಪೂರ್ಣ ಸುಟ್ಟು ಹೋಗಿವೆ.

‘ಬೆಂಕಿ ಆವರಿಸುತ್ತಿರುವುದು ಕಂಡ ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು. 30 ಕಿ.ಮೀ. ಅಂತರವಿರುವ ಭಾಲ್ಕಿಯಿಂದ ಸೋನಾಳಕ್ಕೆ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಬೆಂಕಿಯ ವೇಗ ಹೆಚ್ಚಾಗಿ ಸುಟ್ಟು ಭಸ್ಮವಾಗಿವೆ. 20ಕ್ಕೂ ಅಧಿಕ ಯುವಕರು ಬೆಂಕಿ ನಂದಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ’ ಎಂದು ಮುಖಂಡ ಅಂಕುಶ ಬಿರಾದಾರ ತಿಳಿಸಿದರು.

ADVERTISEMENT

ಸ್ಥಳಕ್ಕೆ ಪಿಡಿಒ ಧೋಂಡಿಬಾ ಆಳಂದಿಕರ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪೊಲಿಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಬೆಂಕಿ ಅನಾಹುತಕ್ಕೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

ಅಗ್ನಿಶಾಮಕ ಠಾಣೆ ಸ್ಥಾಪಿಸಲು ಆಗ್ರಹ

‘ಕಮಲನಗರ ತಾಲ್ಲೂಕು ಘೋಷಣೆಗೊಂಡು 3 ವರ್ಷಗಳು ಕಳೆದಿವೆ. ಔರಾದ್‌ ಅಗ್ನಿಶಾಮಕ ಠಾಣೆ 40 ಕಿ.ಮೀ ಮತ್ತು ಭಾಲ್ಕಿ ಅಗ್ನಿಶಾಮಕ ಠಾಣೆ 30 ಕಿ.ಮೀ. ಅಂತರದಲ್ಲಿವೆ. ಸೋನಾಳ ಕಮಲನಗರದಿಂದ 10 ಕಿ.ಮೀ.ಅಂತರ ಇದೆ. ಅಗ್ನಿಶಾಮಕ ಠಾಣೆ ಕಮಲನಗರದಲ್ಲಿದ್ದರೆ ಬೆಂಕಿಯಿಂದ ಆಗುವ ಹಾನಿಯನ್ನು ತಪ್ಪಿಸಬಹುದಾಗಿತ್ತು. ಕೂಡಲೇ ಕಮಲನಗರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.