ADVERTISEMENT

ಉಪ ಚುನಾವಣೆ: ವಾಪಸ್ ಪಡೆದ ಎಂ.ಜಿ.ಮುಳೆ ನಿರ್ಣಯಕ್ಕೆ ಮರಾಠಾ ಸಮಾಜ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 10:34 IST
Last Updated 4 ಏಪ್ರಿಲ್ 2021, 10:34 IST
   

ಬಸವಕಲ್ಯಾಣ (ಬೀದರ್ ಜಿಲ್ಲೆ):ಉಪ ಚುನಾವಣೆಗೆ ಎನ್.ಸಿ‌.ಪಿಪಕ್ಷದಿಂದ ಸಲ್ಲಿಸಿದ್ದ ನಾಮಪತ್ರವನ್ನುವಾಪಸ್ ಪಡೆದು ಬಿಜೆಪಿ ಬೆಂಬಲಿಸುವುದಾಗಿ ಹೇಳಿರುವ ಮಾಜಿ ಶಾಸಕ ಎಂ.ಜಿ.ಮುಳೆ ಅವರ ನಿರ್ಣಯಕ್ಕೆ‌, ಸಕಲ ಮರಾಠಾ ಸಮಾಜದಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.ಸಕಲ ಮರಾಠಾ ಸಮಾಜದ ಸಭೆ ನಗರದ ಶಿವಾಜಿ ಪಾರ್ಕ್‌ನಲ್ಲಿ ಶನಿವಾರ ನಡೆಯಿತು.

ಮರಾಠಾ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ. ಆದ್ದರಿಂದ ನಾನು ನಾಮಪತ್ರ ಹಿಂದಕ್ಕೆ ಪಡೆದಿದ್ದೇನೆ ಎಂದು ಮುಳೆ ಸುಳ್ಳು ಹೇಳುತ್ತಿದ್ದಾರೆ. ಬೇಡಿಕೆ ಬಗೆಹರಿಸುವ ಬಗ್ಗೆ ಅವರು ಅವರೊಬ್ಬರ ಕಿವಿಯಲ್ಲಿಯೇ ಹೇಗೆ ಹೇಳಿದರು ಎಂದು ಕೆಲವರು ಪ್ರಶ್ನಿಸಿದರು. ಸಮಾಜದ ಯಾರೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರು ಸ್ವ ಇಚ್ಚೆಯಿಂದ ಈ ತೀರ್ಮಾನಕ್ಕೆ ಬಂದಿದ್ದರಿಂದ ಅವರ ಹಿಂದೆ ಸಮಾಜ ಇಲ್ಲ ಎಂದು ಕೆಲವರು ಪ್ರಕಟಿಸಿದರು.

ಮುಳೆ ಈ ನಿರ್ಣಯ ಕೈಗೊಂಡು ಸಮಾಜಕ್ಕೆ ಹಾಗೂ ಎನ್.ಸಿ‌.ಪಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮುಳೆ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯಲಾಯಿತು. ಮುಳೆ ಅವರಿಗೆ ಧಿಕ್ಕಾರ ಎಂದು ಘೋಷಣೆ ಕೂಗಲಾಯಿತು.

ಸಕಲ ಮರಾಠಾ ಕ್ರಾಂತಿ ಮೋರ್ಚಾ ಜಿಲ್ಲಾ ಸಂಯೋಜಕ ವಕೀಲ ನಾರಾಯಣ ಗಣೇಶ, ಶಿವಾಜಿರಾವ್ ಪಾಟೀಲ, ಜಿಲ್ಲಾ ಪಂಚಾಯತಿ ಪಂಚಾಯತಿ ಸದಸ್ಯ ಆನಂದ ಪಾಟೀಲ. ಹಿರಿಯ ಮುಖಂಡ ಅಂಗದರಾವ್ ಜಗತಾಪ, ಮಹಾದೇವ ಹಸೂರೆ, ಮಹೇಶ ಪಾಟೀಲ, ಸಂಭಾಜಿ ಬ್ರಿಗೇಡ್ ಜಿಲ್ಲಾ ಸಂಚಾಲಕ ಖಂಡೇರಾವ್ ರನವೆ, ತಾಲ್ಲೂಕು ಸಂಯೋಜಕ ಅಜಿಂಕ್ಯ ಮುಳೆ, ಬಾಲಾಜಿ ಸಾವಳೆ, ರಾಜಕುಮಾರ ಮೊದಲಾದವರು ಮಾತನಾಡಿದರು. ಎನ್.ಸಿ.ಪಿ‌ ಜಿಲ್ಲಾ ಘಟಕದ ಅಧ್ಯಕ್ಷ ರಾಮಭಾವು ಜಾಧವ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.