ADVERTISEMENT

ಮಕ್ಕಳ ನೆರವಿಗೆ 1098ಗೆ ಕರೆ ಮಾಡಿ

ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ನೆಲ್ಸನ್ ರಾಚೆ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 16:43 IST
Last Updated 25 ಜುಲೈ 2019, 16:43 IST
ಡಾನ್ ಬೊಸ್ಕೊ ಸಂಸ್ಥೆಯ ಸಂಚಾಲಿತ ಮಕ್ಕಳ ಸಹಾಯವಾಣಿ 1098 ವತಿಯಿಂದ ಬೀದರ್‌ ನಗರದ ನೌಬಾದ್‌ನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಚಂದ್ರಕಲಾ ಮೊಳಕೇರಿ ಮಾತನಾಡಿದರು. ನೆಲ್ಸನ್ ರಾಚೆ, ಸಂಜುಕುಮಾರ ಡಾಕುಳಗಿ, ಸಾವನ್ ವಾಗ್ಲೆ, ಪದ್ಮಾವತಿ ಇದ್ದರು
ಡಾನ್ ಬೊಸ್ಕೊ ಸಂಸ್ಥೆಯ ಸಂಚಾಲಿತ ಮಕ್ಕಳ ಸಹಾಯವಾಣಿ 1098 ವತಿಯಿಂದ ಬೀದರ್‌ ನಗರದ ನೌಬಾದ್‌ನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಚಂದ್ರಕಲಾ ಮೊಳಕೇರಿ ಮಾತನಾಡಿದರು. ನೆಲ್ಸನ್ ರಾಚೆ, ಸಂಜುಕುಮಾರ ಡಾಕುಳಗಿ, ಸಾವನ್ ವಾಗ್ಲೆ, ಪದ್ಮಾವತಿ ಇದ್ದರು   

ಬೀದರ್: ‘ಸಂಕಷ್ಟದಲ್ಲಿ ಇರುವ ಮಕ್ಕಳ ನೆರವಿಗೆ 1098ಗೆ ಕರೆ ಮಾಡಬೇಕು’ ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ನೆಲ್ಸನ್ ರಾಚೆ ಹೇಳಿದರು.

ಇಲ್ಲಿಯ ನೌಬಾದ್‌ನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಾನ್ ಬೊಸ್ಕೊ ಸಂಚಾಲಿತ ಮಕ್ಕಳ ಸಹಾಯವಾಣಿ 1098 ವತಿಯಿಂದ ಗುರುವಾರ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳ ಸಹಾಯವಾಣಿ 1098 ದಿನದ 24 ಗಂಟೆ ನಿರಂತರ ಕಾರ್ಯನಿರ್ವಹಿಸುತ್ತಿದೆ. ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಮಕ್ಕಳ ಸಹಾಯವಾಣಿ ಜನ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಯಾರು ಬೇಕಾದರೂ ಕರೆ ಮಾಡಿ ಸಂಕಷ್ಟದಲ್ಲಿರುವ ಮಕ್ಕಳ ಬಗ್ಗೆ ಮಾಹಿತಿ ಕೊಡಬಹುದು’ ಎಂದು ಹೇಳಿದರು.


ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಪದ್ಮಾವತಿ ಮಾತನಾಡಿ, ‘ಪೊಲೀಸರು ಇರುವುದೇ ಜನರ ರಕ್ಷಣೆಗಾಗಿ. ಹೀಗಾಗಿ ಪೊಲೀಸರಿಗೆ ಹೆದರಬಾರದು. ಅವರ ಬಳಿ ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.

‘ಅಪರಿಚಿತ ಮಕ್ಕಳು ಕಂಡು ಬಂದರೆ ಸಾರ್ವಜನಿಕರು ದೂರವಾಣಿ ಸಂಖ್ಯೆ 100 ಅಥವಾ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಬೇಕು’ ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸಾವನ್ ವಾಗ್ಲೆ ಮಾತನಾಡಿ, ‘ಮಕ್ಕಳ ಮೇಲಿನ ಅತ್ಯಾಚಾರಗಳನ್ನು ತಡೆಗಟ್ಟಬೇಕು’ ಎಂದು ಹೇಳಿದರು.

‘ಶಿಕ್ಷಣದಿಂದ ದೂರ ಉಳಿದ ಮಕ್ಕಳನ್ನು ಗುರುತಿಸಬೇಕು. ಅವರನ್ನು ಮತ್ತೆ ಮುಖ್ಯ ವಾಹಿನಿಗೆ ತರಬೇಕು’ ಎಂದು ಸಲಹೆ ಮಾಡಿದರು.

ನೌಬಾದ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ ಮೊಳಕೇರಿ ಮಾತನಾಡಿ, ‘ಮಕ್ಕಳ ಸರ್ವಾಂಗೀಣ ಬೆಳವಣಿಗೆ ಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶ್ರಮಿಸಬೇಕು’ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಸಂಜುಕುಮಾರ ಡಾಕುಳಗಿ ಮಾತನಾಡಿದರು.ರಘುವೆಲ್, ಜಾನ್ಸನ್ ಇದ್ದರು. ಸಾಲೋಮನ್ ಖಾದಿ ನಿರೂಪಿಸಿದರು. ಪ್ರಭಾಕರ ಮಾಳಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.