ADVERTISEMENT

ಹಿರಿತನ ಬಿಟ್ಟುಕೊಟ್ಟ ಹಿರೇಕಾಯಿ

ಮಾರುಕಟ್ಟೆಯಲ್ಲಿ ದೊಣ್ಣೆ ಮೆಣಸಿನಕಾಯಿ ಅಧಿಪತ್ಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 13:45 IST
Last Updated 22 ಮಾರ್ಚ್ 2019, 13:45 IST
ಬೀದರ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ಡೊಣ್ಣ ಮೆಣಸಿನಕಾಯಿ
ಬೀದರ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ಡೊಣ್ಣ ಮೆಣಸಿನಕಾಯಿ   

ಬೀದರ್‌: ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ದೊಣ್ಣೆ ಮೆಣಸಿನಕಾಯಿ ಹಾಗೂ ಬೀನ್ಸ್‌ ಗರಿಷ್ಠ ಬೆಲೆಗೆ ಏರಿದವು. ಹೀಗಾಗಿ ಹಿರೇಕಾಯಿ ಅನಿವಾರ್ಯವಾಗಿ ಮಾರುಕಟ್ಟೆಯಲ್ಲಿನ ಹಿರಿತನ ಬಿಟ್ಟುಕೊಡಬೇಕಾಯಿತು. ಏತನ್ಮಧ್ಯೆ ಬೀನ್ಸ್‌ ಸಹ ತನ್ನ ಛಾಪು ಮೂಡಿಸಿತು.

ಈ ಬಾರಿ ಬೀನ್ಸ್‌ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2,500 ವರೆಗೆ ಏರಿದರೆ, ದೊಣ್ಣೆ ಮೆಣಸಿನಕಾಯಿ ₹ 500, ಮೆಣಸಿನಕಾಯಿ ₹ 1 ಸಾವಿರ ಹಾಗೂ ಆಲೂಗಡ್ಡೆ ಬೆಲೆ ₹ 300 ಹೆಚ್ಚಳವಾಯಿತು.

ಗಗನಕ್ಕೆ ಚಿಮ್ಮಿದ್ದ ಬೆಳ್ಳೂಳ್ಳಿ ಬೆಲೆ ಒಂದೇ ವಾರದಲ್ಲಿ ಕ್ವಿಂಟಲ್‌ಗೆ ₹ 4,500 ವರೆಗೆ ಕುಸಿಯಿತು ಮೆಂತೆಸೊಪ್ಪು, ಬೆಂಡೆಕಾಯಿ ₹ 2 ಸಾವಿರ, ಹಿರೇಕಾಯಿ ₹ 1 ಸಾವಿರ, ಹೂಕೋಸು, ಗಜ್ಜರಿ ಹಾಗೂ ಕೊತಂಬರಿ ತಲಾ ₹ 500 ಹಾಗೂ ಈರುಳ್ಳಿ ಬೆಲೆ ₹ 400ರ ವರೆಗೆ ಇಳಿಯಿತು. ಬದನೆಕಾಯಿ ಹಾಗೂ ಕರಿಬೇವು ಸೊಪ್ಪಿನ ಬೆಲೆ ಸ್ಥಿರವಾಗಿತ್ತು.

ADVERTISEMENT

ಬೀದರ್‌ ಮಾರುಕಟ್ಟೆಗೆ ನೆರೆಯ ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಬೆಂಡೆಕಾಯಿ, ಹಿರೇಕಾಯಿ, ಮೆಂತೆ ಸೊಪ್ಪು, ಜಾಲನಾದಿಂದ ಬೆಳ್ಳೂಳ್ಳಿ, ಹಸಿ ಮೆಣಸಿನಕಾಯಿ ಹಾಗೂ ಉತ್ತರಪ್ರದೇಶದ ಆಗ್ರಾದಿಂದ ಆಲೂಗಡ್ಡೆ ಆವಕವಾಗಿದೆ.

ತೆಲಂಗಾಣದ ಚಾರ್‌ನಗರದಿಂದ ಚೌಳೆಕಾಯಿ, ಡೊಣ್ಣ ಮೆಣಸಿನಕಾಯಿ, ಬೆಂಡೆಕಾಯಿ, ಹೈದರಾಬಾದ್‌ನಿಂದ ಬಿಟ್‌ರೂಟ್‌, ಬೀನ್ಸ್, ತೊಂಡೆಕಾಯಿ, ಹೂಕೋಸು ಬಂದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಟೊಮೆಟೊ ಹಾಗೂ ಕರಿಬೇವು ಮಾರುಕಟ್ಟೆಗೆ ಬಂದ ಕಾರಣ ಗ್ರಾಹಕರಿಗೆ ಕಡಿಮೆ ದರದಲ್ಲಿ ದೊರಕುವಂತಾಯಿತು.

‘ಬಿಸಿಲು ಹೆಚ್ಚುತ್ತಿದ್ದು, ಬರುವ ದಿನಗಳಲ್ಲಿ ಮಾರುಕಟ್ಟೆಗೆ ತರಕಾರಿ ಕಡಿಮೆ ಬರಲಿದೆ. ಮದುವೆ, ಮುಂಜಿವೆ, ಭಾಸುಣಿಕೆ, ತೊಟ್ಟಿಲು ಕಾರ್ಯಕ್ರಮಗಳು ನಡೆಯುವುದರಿಂದ ಹೆಚ್ಚು ತರಕಾರಿ ಬೇಕಾಗಲಿದೆ. ಬೇಡಿಕೆ ಹೆಚ್ಚಿದಂತೆ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದು ನಗರದ ತರಕಾರಿ ಸಗಟು ವ್ಯಾಪಾರಿ ಅಬ್ದುಲ್‌ ಗಣಿ ಹಾಗೂ ಅಲ್ಲಾವುದ್ದೀನ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.