ADVERTISEMENT

ಮದರಸಾದ ಬಳಿ ಪೂಜೆ: 60 ಜನರ ವಿರುದ್ಧ ಪ್ರಕರಣ, ಪೊಲೀಸ್‌ ಬಿಗಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 16:13 IST
Last Updated 6 ಅಕ್ಟೋಬರ್ 2022, 16:13 IST
ಮಹಮೂದ್‌ ಗವಾನ್‌ ಸ್ಮಾರಕಕ್ಕೆ ಹಾನಿ ಮಾಡಲು ಯತ್ನಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಟೌನ್‌ ಪೊಲೀಸ್‌ ಠಾಣೆ ಆವರಣದಲ್ಲಿ ಮುಸ್ಲಿಂ ಯುವಕರು ಪ್ರತಿಭಟನೆ ನಡೆಸಿದರು
ಮಹಮೂದ್‌ ಗವಾನ್‌ ಸ್ಮಾರಕಕ್ಕೆ ಹಾನಿ ಮಾಡಲು ಯತ್ನಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಟೌನ್‌ ಪೊಲೀಸ್‌ ಠಾಣೆ ಆವರಣದಲ್ಲಿ ಮುಸ್ಲಿಂ ಯುವಕರು ಪ್ರತಿಭಟನೆ ನಡೆಸಿದರು   

ಬೀದರ್: ಒಳಕೋಟೆ ಭವಾನಿ ದೇವಿ ಮೂರ್ತಿಯ ಮೆರವಣಿಗೆಯಲ್ಲಿ ಬಂದ ಕೆಲವರು ನಗರದ ಓಲ್ಡ್‌ಸಿಟಿಯಲ್ಲಿರುವ ಮಹಮೂದ್‌ ಗವಾನ್‌ ಸ್ಮಾರಕದ ಬಳಿ ಪೂಜೆ ಸಲ್ಲಿಸಿದ ದೃಶ್ಯ ಸೆರೆ ಹಿಡಿದು ವೈರಲ್‌ ಮಾಡಿದ ವಿಡಿಯೊದಿಂದಾಗಿ ಓಲ್ಡ್‌ಸಿಟಿಯಲ್ಲಿ ತ್ವೇಷಮಯ ವಾತಾವರಣ ಸ್ಟಷ್ಟಿಯಾಗಿದೆ.

ಗುಂಪಿನಲ್ಲಿ ಬಂದ ಒಂಬತ್ತು ಜನರು ಪೊಲೀಸರ ಸಮ್ಮುಖದಲ್ಲಿಯೇ ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಸ್ಮಾರಕದೊಳಗೆ ಅಕ್ರಮವಾಗಿ ಪ್ರವೇಶಿಸಿ ಕಾನೂನು ಬಾಹಿರವಾಗಿ ಪೂಜೆ ಸಲ್ಲಿಸಿದ್ದಾರೆ. ಧಾರ್ಮಿಕ ಸಾಮರಸ್ಯ ಕದಡಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಸ್ಲಿಮ್ ಸಮುದಾಯದ ಕೆಲವರು ಟೌನ್‌ ಪೊಲೀಸ್ ಠಾಣೆಯ ಅವರಣದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಹಾಗೂ ಡಿವೈಎಸ್‌ಪಿ ಸತೀಶ ಮಾತನಾಡಿ, ಈಗಾಗಲೇ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾತ್ರಿ ವೇಳೆಯಲ್ಲಿ ಸ್ಮಾರಕ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಓಲ್ಡ್‌ಸಿಟಿಯಲ್ಲಿ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನಾನಿರತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ಕೊನೆಗೊಳಿಸದಿದ್ದರೆ ಬಂಧಿಸುವುದು ಅನಿವಾರ್ಯವಾಗಲಿದೆ ಎಂದುಪೊಲೀಸರು ಎಚ್ಚರಿಕೆ ನೀಡಿದ ನಂತರ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು.

ಪ್ರಕರಣ ದಾಖಲು:ಉದ್ಯಮಿ ಸೈಯ್ಯದ್‌ ಮುಬಾಶಿರ್‌ ಅಲಿ ಮಾರ್ಕೆಟ್‌ ಠಾಣೆಯಲ್ಲಿ ನೀಡಿರುವ ಲಿಖಿತ ದೂರು ಆಧರಿಸಿ ಪೊಲೀಸರು 9 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ ನರೇಶ ಗೌಳಿ, ಪ್ರಕಾಶ, ವಿನು, ಮನ್ನಾ, ಸಾಗರ ಬಂಟಿ, ಜಗದೀಶ ಗೌಳಿ, ಅರುಣ ಗೌಳಿ, ಗೋರಖ ಗೌಳಿ ಸೇರಿ 60 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ಬೆಳಗಿನ ಜಾವ 1.30ಕ್ಕೆ ಅರೋಪಿಗಳು ಮಹಮೂದ್‌ ಗವಾನ್‌ ಮದರಸಾ ಹಾಗೂ ಮಸೀದಿ ಬೀಗ ಒಡೆದು ಮದರಸಾದ ಕಾವಲುಗಾರನಿಗೆ ಬೆದರಿಕೆ ಹಾಕಿದ್ದಾರೆ. ಕಾನೂನು ಬಾಹಿರವಾಗಿ ಸ್ಮಾರಕ ಪ್ರದೇಶದೊಳಗೆ ಪ್ರವೇಶಿಸಿ ಶಾಂತಿ, ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ. ಹಿಂಸಾಚಾರ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ಕೆಲವರು ದೇಶದ ವಿರುದ್ಧವೇ ಘೋಷಣೆಗಳನ್ನು ಕೂಗಿ ಪ್ರಚೋದಿಸಲು ಹಾಗೂ ಸ್ಮಾರಕಕ್ಕೆ ಹಾನಿ ಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪೊಲೀಸ್‌ ಸಿಬ್ಬಂದಿಯ ಎದುರಲ್ಲೇ ಈ ಕೃತ್ಯ ನಡೆಸಲಾಗಿದೆ. ತಪ್ಪಿತಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೈಯ್ಯದ್‌ ಮುಬಾಶಿರ್‌ ಅಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಡಿಯೊ ವೈರಲ್‌: ರಾತ್ರಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕೆಲ ಯುವಕರು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡು ವೈರಲ್‌ ಮಾಡಿದ್ದಾರೆ. ಬೆಳಿಗ್ಗೆ ಮುಸ್ಲಿಮರು ಮಸೀದಿಗೆ ನಮಾಜ್‌ಗೆ ಬಂದಾಗ ಸುದ್ದಿ ಇನ್ನಷ್ಟು ಪಸರಿಸಿ ಮಧ್ಯಾಹ್ನದ ವೇಳೆಗೆ ಓಲ್ಡ್‌ಸಿಟಿಯಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂದೋಬಸ್ತ್‌ ಬಿಗಿಗೊಳಿಸಿದ್ದಾರೆ.

ಭದ್ರತೆ ಹೆಚ್ಚಳ:ಮೆಹಮೂದ್‌ ಗವಾನ್‌ ಸ್ಮಾರಕದ ರಕ್ಷಣೆಗೆ ಇಬ್ಬರು ಕಾವಲುಗಾರರನ್ನು ನೇಮಕ ಮಾಡಲಾಗಿದೆ. ಬೆಳಿಗ್ಗೆಯಿಂದ ರಾತ್ರಿ 10 ಗಂಟೆ ವರೆಗೆ ಎರಡು ಪಾಳಿಯಲ್ಲಿ ಕಾವಲು ಮಾಡುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕಾವಲುಗಾರರು ಇರುವುದಿಲ್ಲ. ಸ್ಮಾರಕದ ಸುರಕ್ಷತೆ ದೃಷ್ಟಿಯಿಂದ ಇನ್ನೊಬ್ಬ ಕಾವಲುಗಾರನನ್ನು ನಿಯೋಜಿಸುವಂತೆ ಎಎಸ್‌ಐಗೆ ಪತ್ರ ಬರೆಯಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆಯ ಬೀದರ್‌ನ ಸ್ಮಾರಕ ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ತಿಳಿಸಿದ್ದಾರೆ.

ಕೋಟೆಯೊಳಗಿನ ಭವಾನಿ ಮಂದಿರದ ಭಕ್ತರು ಪ್ರತಿ ವರ್ಷ ಸಾಂಕೇತಿಕವಾಗಿ ಓಲ್ಡ್‌ಸಿಟಯ ಮಹಮೂದ್‌ ಗವಾನ್‌ ಸ್ಮಾರಕ ಬಳಿ ಕಟ್ಟೆಗೆ ಪೂಜೆ ಸಲ್ಲಿಸುತ್ತಾರೆ. ಮೊದಲು ಚಿಕ್ಕದಾದ ಅರಳಿ ಮರ ಇತ್ತು ಎನ್ನಲಾಗಿದೆ. ಈಗ ಮರ ಇಲ್ಲ. ಆದರೆ, ಅಲ್ಲಿ ಟೆಂಗಿನಕಾಯಿ ಒಡೆದುಕೊಂಡು ಹೋಗುವ ಸಂಪ್ರದಾಯ ಈಗಲೂ ಇದೆ. ಸ್ಮಾರಕಕ್ಕೆ ಯಾವುದೇ ರೀತಿಯ ಹಾನಿ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.