ADVERTISEMENT

ಬಕ್ರಿದ್ ಹಬ್ಬ ಶಾಂತಿಯುತ ಆಚರಿಸಿ: ಗೋವಿಂದ ರೆಡ್ಡಿ ಮನವಿ

ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:53 IST
Last Updated 3 ಜುಲೈ 2022, 1:53 IST
ಬಕ್ರಿದ್ ಪ್ರಯುಕ್ತ ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು. ಡೆಕ್ಕ ಕಿಶೋರಬಾಬು, ಶಿಲ್ಪಾ ಎಂ ಇದ್ದರು
ಬಕ್ರಿದ್ ಪ್ರಯುಕ್ತ ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು. ಡೆಕ್ಕ ಕಿಶೋರಬಾಬು, ಶಿಲ್ಪಾ ಎಂ ಇದ್ದರು   

ಬೀದರ್: ಜಿಲ್ಲೆಯಲ್ಲಿ ಜುಲೈ 10 ರಂದು ಬಕ್ರಿದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮನವಿ ಮಾಡಿದರು.

ಬಕ್ರಿದ್ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆ ಮೊದಲಿನಿಂದಲೂ ಶಾಂತಿಗೆ ಹೆಸರಾಗಿದೆ. ಎಲ್ಲ ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಬಕ್ರಿದ್ ವೇಳೆಯೂ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದು ಎಂದು ತಿಳಿಸಿದರು.

ADVERTISEMENT

ಮಳೆಗಾಲ ಇರುವ ಕಾರಣ ನಗರಸಭೆ ಸಿಬ್ಬಂದಿ ಬೀದರ್ ನಗರದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಮಾತನಾಡಿ, ಅಕ್ರಮ ಜಾನುವಾರು ಸಾಗಣೆ ತಡೆಗೆ ಹೊಸ ಕಾನೂನು ಬಂದಿದ್ದು, ಇದನ್ನು ಯಾರೂ ಉಲ್ಲಂಘಿಸಬಾರದು ಎಂದು ಹೇಳಿದರು.
ಅಕ್ರಮ ಜಾನುವಾರು ತಡೆಗೆ ಜಿಲ್ಲೆಯಲ್ಲಿ ಒಟ್ಟು 17 ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ 80 ರಿಂದ 90 ಜಾನುವಾರುಗಳನ್ನು ವಶಪಡಿಸಿಕೊಂಡು, ಗೋಶಾಲೆಗೆ ಕಳುಹಿಸಲಾಗಿದೆ ಎಂದರು.

ಯಾರಿಗಾದರೂ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವ ಮಾಹಿತಿ ದೊರೆತರೆ 112 ಗೆ ಕರೆ ಮಾಡಬೇಕು. ಹತ್ತಿರದ ಠಾಣೆಗೆ ದೂರು ನೀಡಬೇಕು. ಸ್ಪಂದಿಸದಿದ್ದರೆ ತಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಅಕ್ರಮ ಜಾನುವಾರು ಸಾಗಣೆ ಮಾಡಿದ್ದಲ್ಲಿ ₹50 ಸಾವಿರದಿಂದ ₹1 ಲಕ್ಷ ದಂಡ ಹಾಗೂ 7 ವರ್ಷ ಜೈಲು ಶಿಕ್ಷೆ ಇದೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ. ಇದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಹಿಂದೂ, ಮುಸ್ಲಿಂ ಸಮುದಾಯದ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.