ADVERTISEMENT

ಮಹರ್ಷಿ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಿಸಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 12:56 IST
Last Updated 28 ಸೆಪ್ಟೆಂಬರ್ 2022, 12:56 IST

ಮಹರ್ಷಿ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಿಸಿ

ಬೀದರ್: ‘ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ADVERTISEMENT

ಅಕ್ಟೋಬರ್ 9 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗುವುದು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಆರಂಭವಾಗಿ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರೇಮಸಾಗರ ದಾಂಡೇಕರ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮುದಾಯದ ಜಿಲ್ಲಾ ಘಟಕದ ಧ್ಯಕ್ಷ ಜಗನ್ನಾಥ ಜಮಾದಾರ, ಉಪಾಧ್ಯಕ್ಷ ಸುನೀಲ ಭಾವಿಕಟ್ಟಿ ಇದ್ದರು.

‘ಉಚಿತ ಹೃದಯ ತಪಾಸಣೆ ಶಿಬಿರದ ಲಾಭ ಪಡೆಯಿರಿ’

ಬೀದರ್: ಜಿಲ್ಲೆಯ ಸರ್ಕಾರಿ ನೌಕರರು ಬೀದರ್‌ನ ಗುದಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಗುರುವಾರ (ಸೆ. 29) ಹಮ್ಮಿಕೊಳ್ಳಲಾದ ಉಚಿತ ಹೃದಯ ರೋಗ ತಪಾಸಣೆ ಶಿಬಿರದ ಲಾಭ ಪಡೆಯಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮನವಿ ಮಾಡಿದ್ದಾರೆ.

ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಯಲಿರುವ ಶಿಬಿರದಲ್ಲಿ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಪುರುಷ ನೌಕರರು ತಂದೆ, ತಾಯಿ, ಪತ್ನಿ ಮತ್ತು ಮಕ್ಕಳು ಹಾಗೂ ಮಹಿಳಾ ನೌಕರರು ತಂದೆ, ತಾಯಿಯ ತಪಾಸಣೆ ಸಹ ಉಚಿತವಾಗಿ ಮಾಡಿಸಬಹುದು ಎಂದು ಹೇಳಿದ್ದಾರೆ.

ಹೃದಯ ರೋಗ ತಜ್ಞ ಡಾ.ನಿತಿನ್ ಗುದಗೆ ಅವರ ನೇತೃತ್ವದಲ್ಲಿ ವೈದ್ಯರು ತಪಾಸಣೆ ಮಾಡಲಿದ್ದಾರೆ. ಇಸಿಜಿ, ಟಿಎಂಟಿ, ರಕ್ತದೊತ್ತಡ, 2ಡಿ ಇಕೋ ಪರೀಕ್ಷೆಗಳನ್ನೂ ಉಚಿತವಾಗಿ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕೆಲಸದ ಒತ್ತಡದ ಕಾರಣ ಈಚಿನ ದಿನಗಳಲ್ಲಿ ಸರ್ಕಾರಿ ನೌಕರರ ಹೃದಯಾಘಾತ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿವೆ. ಹೀಗಾಗಿ ನೌಕರರು ಹೃದಯ ರೋಗದ ಮಾಹಿತಿ ಅರಿಯಬೇಕು. ತಪಾಸಣೆ ಮಾಡಿಸಿಕೊಂಡು ಹೃದಯದ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದಾರೆ.

ಅ.1ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ಬೀದರ್: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಮಡಿವಾಳ ವೃತ್ತ ಸಮೀಪದ ಜಿಲ್ಲಾ ಬಾಲ ಭವನದಲ್ಲಿ ನಡೆಯಲಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಿರಿಯ ನಾಗರಿಕರು ವಿವರಗಳಿಗೆ ಸಹಾಯವಾಣಿ ಕೇಂದ್ರ ದೂರವಾಣಿ 08482-223771, 08482-234647ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.