ADVERTISEMENT

ಬೀದರ್‌ | ಹೊರಾಂಗಣ ‘ಚೆಸ್‌ ಥೀಮ್‌ ಪಾರ್ಕ್‌’

ಮಾಣಿಕ್‌ ನಗರ ಗ್ರಾಮ ಪಂಚಾಯಿತಿಯಿಂದ ವಿನೂತನ ಕೆಲಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಜುಲೈ 2025, 4:57 IST
Last Updated 18 ಜುಲೈ 2025, 4:57 IST
ಹುಮನಾಬಾದ್‌ ಸಮೀಪದ ಮಾಣಿಕ್‌ ನಗರದಲ್ಲಿ ನಿರ್ಮಿಸಿರುವ ಹೊರಾಂಗಣ ಚೆಸ್‌ ಥೀಮ್‌ ಪಾರ್ಕ್‌
ಹುಮನಾಬಾದ್‌ ಸಮೀಪದ ಮಾಣಿಕ್‌ ನಗರದಲ್ಲಿ ನಿರ್ಮಿಸಿರುವ ಹೊರಾಂಗಣ ಚೆಸ್‌ ಥೀಮ್‌ ಪಾರ್ಕ್‌   

ಬೀದರ್‌: ಗ್ರಾಮೀಣ ಭಾಗದ ಮಕ್ಕಳು, ಯುವಕ/ಯುವತಿಯರಲ್ಲಿ ಚದುರಂಗ ಆಟದ ಬಗ್ಗೆ ಆಸಕ್ತಿ ಹೆಚ್ಚಿಸಲು ಹುಮನಾಬಾದ್‌ ಸಮೀಪದ ಮಾಣಿಕ್‌ ನಗರದಲ್ಲಿ ಹೊರಾಂಗಣ ‘ಚೆಸ್‌ ಥೀಮ್‌ ಪಾರ್ಕ್‌’ ನಿರ್ಮಿಸಲಾಗಿದೆ.

ಮಾಣಿಕ್‌ ನಗರ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ 40x40 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಈ ಥೀಮ್‌ ಪಾರ್ಕ್‌ ತಲೆ ಎತ್ತಿದೆ.

ಮಾಣಿಕ್‌ ನಗರ ಗ್ರಾಮ ಪಂಚಾಯಿತಿಯು ₹3 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದು, ಇದಕ್ಕೆ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರ ಹೆಸರಿಡಲಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾದವರ ಹೆಸರುಗಳನ್ನು ಬರೆಸಲಾಗಿದೆ. ಚೆಸ್‌ ಆಡುವವರಿಗೆ ನಾಲ್ಕು ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಬಯಲಿನಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತು ಆಟ ಆಡಬಹುದು. ಇದರೊಂದಿಗೆ ಕೆನೋಪಿ ಕೂಡ ಮಾಡಿದ್ದು, ಅದರಲ್ಲೂ ಆಟವಾಡುವ ಸೌಲಭ್ಯ ಇದೆ.

ADVERTISEMENT

ಹುಮನಾಬಾದ್‌ ಪಟ್ಟಣ ಹಾಗೂ ಗ್ರಾಮೀಣ ಭಾಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಣಿಕ್‌ ನಗರದ ಕ್ರಿಕೆಟ್‌ ಮೈದಾನಕ್ಕೆ ಹೊಂದಿಕೊಂಡಿರುವ ಜಾಗ ಆಯ್ಕೆ ಮಾಡಲಾಗಿದೆ. ಇದರ ಪಕ್ಕದಲ್ಲೇ ಬಾಸ್ಕೆಟ್‌ಬಾಲ್‌ ಮೈದಾನವೂ ಇದೆ. ನಿತ್ಯ ವಿವಿಧ ಕ್ರೀಡೆಗಳನ್ನಾಡಲು ಮಕ್ಕಳು, ಯುವಕರು ಇಲ್ಲಿಗೆ ಬಂದು ಹೋಗುತ್ತಾರೆ. ಹುಮನಾಬಾದ್‌ ಪಟ್ಟಣಕ್ಕೆ ಹತ್ತಿರದಲ್ಲಿ ಇರುವುದರಿಂದ ಯಾರು ಬೇಕಾದರೂ ಸುಲಭವಾಗಿ ಬಂದು ಹೋಗಬಹುದು. ಅವರಿಗೆಲ್ಲ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿ ಥೀಮ್‌ ಪಾರ್ಕ್‌ ಅಭಿವೃದ್ಧಿಪಡಿಸಲಾಗಿದೆ.

ಇದರ ನಿರ್ವಹಣೆಯ ಹೊಣೆಯನ್ನು ಯುವಜನ ಕ್ರೀಡೆ ಮತ್ತು ಸಬಲೀಕರಣ ಇಲಾಖೆಗೆ ವಹಿಸಲಾಗಿದೆ. ಬೆಳಿಗ್ಗೆಯಿಂದ ಸಂಜೆ ವರೆಗೆ ಚದುರಂಗ ಆಡುವುದಕ್ಕೆ ಅವಕಾಶ ಇದೆ. ಯಾರು ಬೇಕಾದರೂ ನೇರ ಬಂದು ಆಟ ಆಡಬಹುದು. ಇದಕ್ಕೆ ಯಾವುದೇ ರೀತಿಯ ಶುಲ್ಕ ಇಲ್ಲ.

‘ಚೆಸ್‌ ಅನ್ನು ಹೆಚ್ಚಾಗಿ ನಗರ ಪ್ರದೇಶದ ಮಕ್ಕಳೇ ಆಡುತ್ತಾರೆ. ಗ್ರಾಮೀಣರಲ್ಲೂ ಆಸಕ್ತಿ ಬೆಳೆಸಬೇಕೆಂಬುದು ಥೀಮ್‌ ಪಾರ್ಕ್‌ ಸ್ಥಾಪನೆಯ ಉದ್ದೇಶ. ಇದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ ಅವರ ಐಡಿಯ. ಕಾರವಾರ ಜಿಲ್ಲೆಯಲ್ಲಿ ಇದೇ ರೀತಿಯ ಥೀಮ್‌ ಪಾರ್ಕ್‌ ಇದ್ದು, ಇಲ್ಲೂ ಆ ತರಹ ಮಾಡಲು ಯೋಜನೆ ರೂಪಿಸಬೇಕೆಂದು ಒಂದು ಸಲ ಹೇಳಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಂಚಶೀಲ ಸಿದ್ದಪ್ಪ, ಪಿಡಿಒ ರಾಜಶೇಖರ್‌ ಬುಳ್ಳಾ ಸೇರಿದಂತೆ ಎಲ್ಲರ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದ ಮೊದಲ ಹೊರಾಂಗಣ ಥೀಮ್‌ ಪಾರ್ಕ್‌’ ಎಂದು ಹುಮನಾಬಾದ್‌ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ. ನಾಯ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಚೆಸ್‌ ಕೇವಲ ಆಟವೊಂದೇ ಅಲ್ಲ, ನಮ್ಮ ಸಮಗ್ರ ಬೆಳವಣಿಗೆ ಮತ್ತು ಶಿಸ್ತು ಮೂಡಿಸಲು ಸಹಕಾರಿ. ಚೆಸ್‌ ಆಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಚಾಕಚಾಕ್ಯತೆ ಬರುತ್ತದೆ. ಮಕ್ಕಳು ಮತ್ತು ಯುವಕರ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ಚೆಸ್‌ ಆಟದಲ್ಲಿ ಮಗ್ನರಾಗಿರುವ ಯುವಕರು
ದೀಪ್ತಿ
ದರ್ಶನ್‌
ಡಾ. ಗಿರೀಶ್‌ ಬದೋಲೆ
ಚೆಸ್‌ ಆಡುವುದರಿಂದ ಶಿಸ್ತು ತಾಳ್ಮೆ ಮತ್ತು ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಬೆಳೆಯುತ್ತದೆ. ಈ ಸೌಲಭ್ಯವನ್ನು ಗ್ರಾಮೀಣ ಭಾಗದ ಮಕ್ಕಳು ಯುವಕರು ಬಳಸಿಕೊಳ್ಳಬೇಕು.
ದೀಪಿಕಾ ಬಿ. ನಾಯ್ಕರ್‌ ಇಒ ಹುಮನಾಬಾದ್‌ ತಾಲ್ಲೂಕು ಪಂಚಾಯಿತಿ
ಚೆಸ್‌ ಥೀಮ್‌ ಪಾರ್ಕ್‌ ಹೊಸದೊಂದು ಆವಿಷ್ಕಾರ ಎಂದು ಹೇಳಬಹುದು. ಕಲಿಕೆಯ ಬಗ್ಗೆ ಗ್ರಾಮೀಣ ಭಾರತ ಹೇಗೆ ವಿಚಾರ ಮಾಡಬೇಕೆಂಬುದರ ದೂರದೃಷ್ಟಿಯ ಸಂಕೇತವಿದು.
ದರ್ಶನ್‌ ಆರ್‌.ಎಸ್‌. ರಾಜೀವಗಾಂಧಿ ಪಂಚಾಯತ್‌ರಾಜ್‌ ಫೆಲೋ ಹುಮನಾಬಾದ್‌
ನಾನು ಕೂಡ ಅಲ್ಲಿಗೆ ಭೇಟಿ ಕೊಟ್ಟಿರುವೆ. ಚೆಸ್‌ ಉತ್ತೇಜನಕ್ಕೆ ಇದು ಸಹಕಾರಿಯಾಗಲಿದೆ. ಬರುವ ದಿನಗಳಲ್ಲಿ ಬೀದರ್‌ ಜಿಲ್ಲಾ ಕ್ರೀಡಾಂಗಣದಲ್ಲೂ ಮಾಡುವ ಯೋಜನೆ ಇದೆ.
ಡಾ.ಗಿರೀಶ್‌ ಬದೋಲೆ ಸಿಇಒ ಜಿಪಂ ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.