ADVERTISEMENT

ಪಶು– ಪಕ್ಷಿಗಳಿಗೆ ನೀರಿನ ವ್ಯವಸ್ಥೆ: ಚಿಟಗುಪ್ಪ ಪುರಸಭೆ ಕಾರ್ಯಕ್ಕೆ ಮೆಚ್ಚುಗೆ

ಪ್ರಜಾವಾಣಿ ವಿಶೇಷ
Published 29 ಮಾರ್ಚ್ 2024, 5:57 IST
Last Updated 29 ಮಾರ್ಚ್ 2024, 5:57 IST
ಚಿಟಗುಪ್ಪ ಪುರಸಭೆ ಕಚೇರಿ ಆವರಣದಲ್ಲಿ ನಲ್ಲಿ ನೀರಿಗೆ ಬಕೇಟ್ ಅಳವಡಿಸಿ ಮಂಗ, ಪಶು-ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು
ಚಿಟಗುಪ್ಪ ಪುರಸಭೆ ಕಚೇರಿ ಆವರಣದಲ್ಲಿ ನಲ್ಲಿ ನೀರಿಗೆ ಬಕೇಟ್ ಅಳವಡಿಸಿ ಮಂಗ, ಪಶು-ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು   

ಚಿಟಗುಪ್ಪ: ಇಲ್ಲಿಯ ಪುರಸಭೆ ಕಚೇರಿ ಆವರಣದಲ್ಲಿ ಕಚೇರಿ ಸಿಬ್ಬಂದಿ ಪಶು–ಪಕ್ಷಿಗಳಿಗೆ ನಿತ್ಯ ಕುಡಿಯುವ ನೀರಿನ ದಾಹ ತಣಿಸುವ ಕಾರ್ಯ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪುರಸಭೆ ಆವರಣದಲ್ಲಿ ಮಾವು-ಬೇವಿನ ಮರಗಳು ಬೃಹದಾಕಾರದಲ್ಲಿ ಬೆಳೆದಿವೆ. ಮಂಗಗಳ ಹಿಂಡು ಮರಗಳ ಮೇಲೆ ಹಿಂಡುಗಟ್ಟಲೇ ಇರುತ್ತವೆ. ಅವುಗಳಿಗೆ ಕುಡಿಯಲು ನೀರು ಸಿಗದಿದ್ದಕ್ಕೆ ಚಡಪಡಿಸುತ್ತಿರುವುದನ್ನು ಕಂಡ ಪುರಸಭೆ ಸಿಬ್ಬಂದಿ ಕುಡಿಯುವುದಕ್ಕಾಗಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಪಟ್ಟಣಕ್ಕೆ ನೀರು ಬಿಡುವ ಸಿಬ್ಬಂದಿಯು ಮೇಲಧಿಕಾರಿಗಳ ಆದೇಶದಂತೆ, ನಿತ್ಯ ಮಾವಿನಮರಗಳ ಕೆಳಗೆ ಇರುವ ನಲ್ಲಿಗೆ ನಿರಂತರವಾಗಿ ನೀರು ಬಿಡುವುದು ಹಾಗೂ ಬಕೆಟ್‌ ಆಕೃತಿಯ ತೊಟ್ಟಿಯಲ್ಲಿ ನೀರು ತುಂಬಿಸುವ ಕಾರ್ಯ ಆರಂಭಿಸಿದ್ದಾರೆ. ಅವರ ಕಾರ್ಯದಿಂದ ಈಗ ನಿತ್ಯ ನೂರಾರು ಪಕ್ಷಿಗಳು, ಮಂಗಗಳು ಬಂದು, ಬಕೆಟ್‌ನಲ್ಲಿರುವ ನೀರು ಕುಡಿಯುತ್ತ ಮಾವಿನ ಮರದ ಮೇಲೆ ಕುಣಿದಾಡುತ್ತ ವಿಶ್ರಾಂತಿ ಪಡೆಯುತ್ತಿವೆ.

ಮರಗಳಲ್ಲಿ ದೂರದಿಂದ ಆಗಮಿಸಿದ ವಿವಿಧ ಬಗೆಯ ಪಕ್ಷಿಗಳು ಕಾಣುತ್ತಿವೆ. ಅವುಗಳ ಚಿಲಿ-ಪಿಲಿಧ್ವನಿ ಎಲ್ಲರ ಮನ ತಣಿಸುತ್ತಿವೆ. ಪರಿಸರ, ಪಕ್ಷಿ-ಪ್ರಾಣಿಪ್ರಿಯರು ಪುರಸಭೆಯ ಈ ಕಾರ್ಯಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಮರಗಳ ಮೇಲೆ ಟೊಂಗೆಯಿಂದ ಟೊಂಗೆಗೆ ಜಿಗಿಯುವ ಮಂಗಗಳು ಕೆಳಗಡೆ ನಿಲ್ಲಿಸಿದ ನಾಗರಿಕರ ಬೈಕ್‌ಗಳ ಮೇಲು ಕುಣಿದಾಡಿ ಅವುಗಳಿಗೆ ಹಾನಿ ಮಾಡುತ್ತಿವೆ. ಆದರೂ ನಾಗರಿಕರು ಜಾನುವಾರುಗಳ ಮೇಲಿನ ಪುರಸಭೆಯವರ ಪ್ರೀತಿ ಕಾಳಜಿ ಮೆಚ್ಚಿ ಸಹಕರಿಸುತ್ತಿದ್ದಾರೆ.

ಪಟ್ಟಣದ ಇತರ ಸರ್ಕಾರಿ, ಖಾಸಗಿ ಕಚೇರಿಗಳ ಸಿಬ್ಬಂದಿಯು, ಪುರಸಭೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ತಮ್ಮಲ್ಲೂ ಪಶು–ಪಕ್ಷಿಗಳಿಗೆ ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಾಗರಿಕರು ತಮ್ಮ ಮನೆಯ ಚಾವಣಿ ಮೇಲೆ ಮುಚ್ಚಳಿಕೆಯಲ್ಲಿ ನೀರು ತುಂಬಿಡಬೇಕು. ಹೀಗೆ ಮಾಡುವುದರಿಂದ ಅವುಗಳ ಸಂತತಿ ಉಳಿಸಿ ಬೆಳೆಸಿದಂತಾಗುತ್ತದೆ. ಪರಿಸರ ಸಂರಕ್ಷಣೆಗೆ ಪರೋಕ್ಷವಾಗಿ ಕಾರಣರಾದಂತೆ ಆಗುತ್ತದೆ ಎಂದು ಮುಖ್ಯಾಧಿಕಾರಿ ಎಸ್.ವಿ. ಭೂಸ್ಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.