ADVERTISEMENT

ಶಾಂತಿ, ಪ್ರೀತಿಯ ಕ್ರಿಸ್‌ಮಸ್ ಸಂಭ್ರಮ

ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ಚರ್ಚ್‌ಗಳು

ಚಂದ್ರಕಾಂತ ಮಸಾನಿ
Published 22 ಡಿಸೆಂಬರ್ 2018, 19:43 IST
Last Updated 22 ಡಿಸೆಂಬರ್ 2018, 19:43 IST
ಬೀದರ್‌ನ ಕುಂಬಾರವಾಡದಲ್ಲಿರುವ ಚರ್ಚ್‌ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ
ಬೀದರ್‌ನ ಕುಂಬಾರವಾಡದಲ್ಲಿರುವ ಚರ್ಚ್‌ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ   

ಬೀದರ್: ಡಿಸೆಂಬರ್‌ ಆರಂಭದಿಂದಲೇ ಕ್ರೈಸ್ತರ ಮನೆ ಮನಗಳಲ್ಲಿ ಸಂಭ್ರಮ ಮನೆ ಮಾಡಿದೆ. ಕ್ರೈಸ್ತರು ಪೂಜೆ ಹಾಗೂ ಪುನಸ್ಕಾರಗಳಲ್ಲಿ ತೊಡಗಿದ್ದಾರೆ. ಹೊಸ ಬಣ್ಣ ಬಳಿದ ಚರ್ಚ್‌ಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿವೆ.

ಶಾಂತಿ ಹಾಗೂ ಪ್ರೀತಿಯೇ ಕ್ರಿಸ್‌ಮಸ್ ತಿರುಳು. ಕ್ರೈಸ್ತರು ಮೂಢ ನಂಬಿಕೆಗಳಿಗೆ ಕಣದಷ್ಟೂ ಆಸ್ಪದವಿಲ್ಲದಂತೆ ವೈಚಾರಿಕ ನೆಲೆಯಲ್ಲಿ ದೇವರನ್ನು ಪ್ರಾರ್ಥಿಸುವಲ್ಲಿ ನಿರತರಾಗಿದ್ದಾರೆ.

ಧರ್ಮ ವ್ಯಾಪಕ ಅರ್ಥವನ್ನು ಒಳಗೊಂಡಿದೆ. ಪ್ರೀತಿ, ವಿಶ್ವಾಸ, ದಯೆ, ಕರುಣೆ, ಪರೋಪಕಾರ ಎಲ್ಲವನ್ನೂ ಒಳಗೊಂಡಿದೆ. ಪರಸ್ಪರ ಸೇವೆಯೇ ದೇವರ ಆರಾಧನೆ. ಪರಿಶುದ್ಧ ಮನಸ್ಸು ಉಳ್ಳವರಿಗೆ ದೇವರು ಶಾಂತಿಯನ್ನು ದಯಪಾಲಿಸುತ್ತಾನೆ ಎನ್ನುವ ನಂಬಿಕೆಯೊಂದಿಗೆ ಕ್ರೈಸ್ತರು ಯೇಸುವಿನ ಜನ್ಮದಿನದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ನಗರದ ಮಂಗಲಪೇಟೆಯಲ್ಲಿರುವ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌, ನಾವದಗೇರಿಯ ಇಮ್ಯಾನುವೆಲ್‌ ಮೆಥೋಡಿಸ್ಟ್‌ ಚರ್ಚ್‌, ಶಹಾಪುರ ಗೇಟ್‌ ಬಳಿಯ ರೋಮನ್‌ ಕೆಥೋಲಿಕ್‌ ಚರ್ಚ್‌, ಕುಂಬಾರವಾಡ, ವಿದ್ಯಾನಗರದ ಚರ್ಚ್‌, ರೋಸ್‌ ಮೆಮೊರಿಯಲ್‌ ಚರ್ಚ್‌, ಮಿರ್ಜಾಪುರದ ಗುಹಾ ದೇವಾಲಯ, ಆಣದೂರಿನ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಚರ್ಚ್‌ಗಳಲ್ಲಿ ಕಳೆದ 22 ದಿನಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಯೇಸುವಿನ ಆರಾಧನೆ ಹಾಗೂ ಭಜನೆಗಾಗಿ ಚರ್ಚ್‌ಗಳ ಆವರಣಗಳಲ್ಲಿ ಪೆಂಡಾಲ್‌ಗಳನ್ನು ಹಾಕಲಾಗಿದೆ. ಗೋದಲಿ, ಯೇಸು, ಮೇರಿ, ಜೋಸೆಫ್ ಹಾಗೂ ಕುರಿಗಳ ಗೊಂಬೆಗಳನ್ನು ಇಡಲಾಗಿದೆ. ಚರ್ಚ್‌ಗೆ ಬರುವ ಮಾರ್ಗದುದ್ದಕ್ಕೂ ಎರಡು ಬದಿಗೂ ಅಲಂಕಾರಿಕ ವಿದ್ಯುತ್‌ ದೀಪಗಳ ಮಾಲೆಗಳನ್ನು ಹಾಕಲಾಗಿದೆ. ಪ್ರಮುಖ ಮಾರ್ಗಗಳಲ್ಲಿ ರಸ್ತೆ ವಿಭಜಕಗಳ ಮಧ್ಯೆ ಯೇಸುವಿನ ಭಾವಚಿತ್ರ ಹಾಗೂ ಸಾಂತಾಕ್ಲಾಸ್ ಕಟೌಟ್‌ಗಳನ್ನು ಅಳವಡಿಸಲಾಗಿದೆ. ಕ್ರೈಸ್ತರ ಬಡಾವಣೆಗಳಲ್ಲಿ ಯೇಸುವಿನ ಜನ್ಮದ ಸಂದೇಶ ಸಾರುವ ನಕ್ಷತ್ರಗಳು ಕಣ್ಮನ ಸೆಳೆಯುತ್ತಿವೆ.

ಡಿಸೆಂಬರ್‌ 2 ರಂದು ಭಾನುವಾರ ಕೆಂಪು ಮೇಣದ ಬತ್ತಿ, 9 ರಂದು ಬಿಳಿ ಮೇಣದ ಬತ್ತಿ, 16 ರಂದು ಮತ್ತೆ ಕೆಂಪು ಮೇಣದ ಬತ್ತಿ ಬೆಳಗಿಸಿದ್ದಾರೆ. ಡಿ.23 ರಂದು ಬಿಳಿ ಮೇಣದ ಬತ್ತಿ ಬೆಳಗಿಸಿ ಆರಾಧನೆ ಮಾಡಲಿದ್ದಾರೆ.

‘ಆರಾಧನೆಯ ಪೂರ್ವದಲ್ಲಿ ಬೆಳಗುವ ಮೇಣದ ಬತ್ತಿಗಳು ಪಾಪ ಪರಿಹಾರ, ಪರಿಶುದ್ಧತೆ, ದ್ರಾರಿದ್ಯವನ್ನು ತೊಲಗಿಸಲು ಬರುವ ಅರಸನ ಆಗಮನ ಹಾಗೂ ಸಮೃದ್ಧಿಯ ಸಂಕೇತವಾಗಿವೆ ಎಂದು ಭಾವಿಸಲಾಗುತ್ತದೆ.
ಮೇಣದ ಬತ್ತಿಯನ್ನು ಯೇಸುವಿನ ಜನ್ಮದಿನದ ಶುಭ ಸಂಕೇತವಾಗಿ ಬೆಳಗಲಾಗುತ್ತದೆ’ ಎಂದು ಮೆಥೋಡಿಸ್ಟ್‌ ಚರ್ಚ್‌ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಎಂ.ಪಿ.ಜೈಪಾಲ್‌ ವಿವರಿಸುತ್ತಾರೆ.

ಬಿಷಪ್‌ ಕರ್ಕರೆ ಸಂದೇಶ
ಸೇಂಟ್‌ ಪೌಲ್ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌ನಲ್ಲಿ 23 ರಂದು ಬೆಳಿಗ್ಗೆ 10.30 ಗಂಟೆಗೆ ರೆವರೆಂಡ್ ಎಂ.ಪಿ.ಜೈಪಾಲ್‌ ಸುವಾರ್ತೆ ನೀಡಲಿದ್ದಾರೆ.

25 ರಂದು ಬೆಳಿಗ್ಗೆ 10 ಗಂಟೆಗೆ ಬಿಷಪ್‌ ಎನ್‌.ಎಲ್‌ ಕರ್ಕರೆ ಭಕ್ತರಿಗೆ ಯೇಸುವಿನ ಸಂದೇಶ ನೀಡಲಿದ್ದಾರೆ.

ಶಹಾಪುರ ಗೇಟ್‌ ಸಮೀಪದ ಸೇಂಟ್‌ ಜೋಸೆಫ್‌ ಚರ್ಚ್‌ನಲ್ಲಿ ಡಿಸೆಂಬರ್ 24 ರಂದು ರಾತ್ರಿ 10 ಗಂಟೆಗೆ
ಕ್ರೈಸ್ತರು ಗೋದಲಿ ಹಾಡುಗಳನ್ನು ಹಾಡಲಿದ್ದಾರೆ. ಅಂದು ಮಧ್ಯರಾತ್ರಿ ಬಲಿಪೂಜೆ, 25 ರಂದು ಬೆಳಿಗ್ಗೆ 9 ಗಂಟೆಗೆ ನಾಡಿನ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.