ADVERTISEMENT

ಹುಲಸೂರ: ಚುಳಕಿನಾಲಾ ಜಲಾಶಯ ಅಭಿವೃದ್ದಿಗೆ ₹175 ಕೋಟಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 3:17 IST
Last Updated 24 ಸೆಪ್ಟೆಂಬರ್ 2025, 3:17 IST
ಹುಲಸೂರ ತಾಲ್ಲೂಕಿನ ಮುಸ್ತಾಪುರ ಗ್ರಾಮದ ಬಳಿಯ ಚುಳಕಿನಾಲಾ ಜಲಾಶಯಕ್ಕೆ ಸೋಮವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಜಲಾಶಯದ ಸ್ಥಿತಿಗತಿಗಳನ್ನು ಪರಿಶೀಲಿಸಿದರು
ಹುಲಸೂರ ತಾಲ್ಲೂಕಿನ ಮುಸ್ತಾಪುರ ಗ್ರಾಮದ ಬಳಿಯ ಚುಳಕಿನಾಲಾ ಜಲಾಶಯಕ್ಕೆ ಸೋಮವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಜಲಾಶಯದ ಸ್ಥಿತಿಗತಿಗಳನ್ನು ಪರಿಶೀಲಿಸಿದರು   

ಹುಲಸೂರ: ಚುಳಕಿನಾಲಾ ಜಲಾಶಯದ ನೀರನ್ನು ಬಸವಕಲ್ಯಾಣ ನಗರದ ಕುಡಿಯುವ ನೀರು ಪೂರೈಕೆಗೆ ಮಾತ್ರ ಬಳಸಲಾಗುತ್ತಿದೆ. ಕೃಷಿ ನೀರಾವರಿಗೆ ಅದರ ಉಪಯೋಗ ಸಾಧ್ಯವಾಗಿಲ್ಲ. ಹೀಗಾಗಿ ಜಲಾಶಯದಲ್ಲಿ ಸಿಸಿ ಲೈನಿಂಗ್‌ ಕಾರ್ಯಕ್ಕಾಗಿ ₹173 ಕೋಟಿ ಮೌಲ್ಯದ ಡಿಪಿಆರ್ ಸಿದ್ಧಗೊಂಡಿದೆ. ಶೀಘ್ರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಗತ್ಯ ಅನುದಾನ ಪಡೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ತಾಲ್ಲೂಕಿನ ಮುಸ್ತಾಪುರ ಗ್ರಾಮದ ಬಳಿಯ ಚುಳಕಿನಾಲಾ ಜಲಾಶಯಕ್ಕೆ ಸೋಮವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ, ಜಲಾಶಯದ ಸ್ಥಿತಿಗತಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

‘ಕೂಡಲೇ ಅಂದಾಜು ₹35- 40 ಕೋಟಿ ವೆಚ್ಚದಲ್ಲಿ 5 ಸಾವಿರ ಎಕರೆ ರೈತರ ಜಮೀನಿಗೆ ನೀರುಣಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು. ನಾಲಾ ಪಿಚ್ಚಿಂಗ್ ಹಾಗೂ ಸ್ವಚ್ಛತೆಗೆ ₹2 ಕೋಟಿಗೆ ಕೂಡಲೇ ಅನುಮೋದನೆ ನೀಡಲಾಗುವುದು. ಮುಂಬರುವ ದಿನಗಳಲ್ಲಿ ರೈತರ ಕೃಷಿ ನೀರಾವರಿಗೆ ಜಲಾಶಯದಿಂದ ನೀರು ಸಿಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

‘ಜಲಾಶಯವು ಸ್ಥಳೀಯ ರೈತರ ಆಶಾಕಿರಣವಾಗಿದ್ದು, ಸಮರ್ಪಕವಾಗಿ ನೀರು ಸಂಗ್ರಹವಾದರೆ ಶೇ 70ಕ್ಕೂ ಹೆಚ್ಚು ಕೃಷಿಭೂಮಿಗೆ ನೀರಾವರಿ ಸಿಗುವ ಸಾಧ್ಯತೆಯಿದೆ. ಆದರೆ ಹುಳು ಹಾಗೂ ಕಾಲುವೆಗಳ ನವೀಕರಣ ಆಗದೇ ಇದ್ದುದರಿಂದ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಸೀಮಿತವಾಗಿದೆ. ಪುನಶ್ಚೇತನಗೊಳಿಸಿದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಗೋಳು ತೋಡಿಕೊಂಡ ರೈತರು: ಸೈರನ್‌ ಕೆಟ್ಟುಹೋಗಿ ನಾಲ್ಕು ವರ್ಷಗಳಾಗಿದೆ. ಈವರೆಗೆ ದುರಸ್ತಿಯಾಗಿಲ್ಲ. ಸೈರನ್‌ ಎಚ್ಚರಿಕೆ ನೀಡದೆಯೇ ನದಿಗೆ ನೀರು ಹರಿಸಲಾಗುತ್ತಿದ್ದು, ಜೀವಹಾನಿಯಾಗುತ್ತಿದೆ. ಕಾಲುವೆಗಳು ಹೂಳು ತುಂಬಿದ್ದು, ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ ಚೆಕ್‌ ಡ್ಯಾಂ ಒಡೆದು ಹೋಗಿದೆ. ಜಲಾಶಯದಿಂದ ರೈತರ ಹೊಲಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ರೈತರಿಗೆ ಜಲಾಶಯದ ಪ್ರಯೋಜನವಾಗುತ್ತಿಲ್ಲ’ ಎಂದು ರೈತರು ಸಚಿವರ ಎದುರು ತಮ್ಮ ಗೋಳು ತೋಡಿಕೊಂಡರು.

ರೈತರ ಗೋಳು ಆಲಿಸಿದ ಸಚಿವರು, ಸಹಾಯಕ ಆಯುಕ್ತ ಮುಕುಲ್ ಜೈನ್‌ ಹಾಗೂ ಕರ್ನಾಟಕ ನೀರಾವರಿ ನಿಗಮ ನೀರಾವರಿ ಇಲಾಖೆ(ಎಇಇ) ಸಂತೋಷ ಮಾಕಾ ಅವರನ್ನು ಕರೆದು ಸೈರನ್‌ ದುರಸ್ತಿ ಹಾಗೂ ಗೇಟ್‌ಗಳ ಪುನಶ್ಚೇತನಗೊಳಿಸಬೇಕು. ನದಿ ಪಾತ್ರದಲ್ಲಿ ಹಾನಿ ಆಗಿರುವ ಬೆಳೆಗಳ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು’ ಎಂದು ಸೂಚಿಸಿದರು.

ತಹಶೀಲ್ದಾರ್ ಶಿವಾನಂದ ಮೇತ್ರೆ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ, ಉಪ ಕೃಷಿ ನಿರ್ದೇಶಕ ಸೂರ್ಯಕಾಂತ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಗೌತಮ, ಪಿಎಸ್ಐ ನಾಗೇಂದ್ರ, ಕೃಷಿ ಅಧಿಕಾರಿ ಆಕಾಶ, ಜಿ.ಪಂ ಮಾಜಿ ಸದಸ್ಯೆ ಲತಾ ಹಾರಕೂಡೆ, ಗ್ರಾಮ ಲೆಕ್ಕಾಧಿಕಾರಿ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿ ವಿವಿಧ ಗ್ರಾಮಗಳಿಂದ ರೈತರು ಉಪಸ್ಥಿತರಿದ್ದರು.

ಚುಳಕಿ ನಾಲಾ ಜಲಾಶಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೆ ಸುತ್ತಮುತ್ತಲಿನ 10 ಸಾವಿರ ಎಕರೆ ಕೃಷಿ ಜಮೀನಿಗೆ ನೀರಾವರಿ ಅನುಕೂಲಕ ಸಿಗಲಿದೆ
– ಈಶ್ವರ ಖಂಡ್ರೆ, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.