ಬೀದರ್: ನಗರದ ಜನವಾಡ ರಸ್ತೆಯಲ್ಲಿನ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ–2 ನ್ಯಾಯಾಲಯದ ನ್ಯಾಯಾಧೀಶ ಎಮ್.ಡಿ.ಶೈಜ್ ಚೌಠಾಯಿ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಬೀದರ್ ಜಿಲ್ಲಾ ಪೊಲೀಸರು ಭೇದಿಸಿ, ಮಹಾರಾಷ್ಟ್ರದ ಪಾರ್ದಿ ಗ್ಯಾಂಗಿನ ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.
ಪಾರ್ದಿ ಗ್ಯಾಂಗಿನ ಮೂವರು ಮಹಾರಾಷ್ಟ್ರದ ಔರಂಗಾಬಾದ್‌ನವರು. ಮೂವರಲ್ಲಿ ಇಬ್ಬರು ತಂದೆ, ಮಗ ಸೇರಿದ್ದಾರೆ. ಮಧ್ಯ ಪ್ರದೇಶದ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ₹1.77 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ತಲಾ 10 ಗ್ರಾಂ ತೂಕದ ಬಂಗಾರದ ಚೈನ್, ಎರಡು ಚಿನ್ನದ ಬಳೆ, 20 ಗ್ರಾಂನ ಬೆಳ್ಳಿ ಚೈನ್, 30 ಗ್ರಾಂ ಬೆಳ್ಳಿಯ ಉಂಗುರ, ಒಂದು ನೀಲಿ ಬಣ್ಣದ ಏರ್‌ಬ್ಯಾಗ್, ಒಂದು ಕಬ್ಬಿಣದ ರಾಡ್, ಒಂದು ಸ್ಕ್ರೂ ಡ್ರೈವರ್ ಸೇರಿದೆ. ನ್ಯಾಯಾಧೀಶರ ಮನೆಯಲ್ಲಿ ಏನೇನು ಕಳುವಾಗಿತ್ತೋ ಎಲ್ಲವನ್ನೂ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಮಾರ್ಚ್ 31ರಂದು ತಡರಾತ್ರಿ ನ್ಯಾಯಾಧೀಶರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನುಗ್ಗಿ, ಅಲ್ಮೇರಾ ಬೀಗ ಮುರಿದು ಚಿನ್ನಾಭರಣ ಕದ್ದೊಯ್ದಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ರಚಿಸಲಾಗಿದ್ದ ಮೂರು ಪೊಲೀಸ್ ತಂಡಗಳು ಉತ್ತಮ ಕೆಲಸ ಮಾಡಿವೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ, ಎಐ ಕಮಾಂಡ್ ಸೆಂಟರ್‌ನಿಂದ ದೊರೆತ ಸುಳಿವು ಆಧರಿಸಿ ಮೂವರನ್ನು ಮಹಾರಾಷ್ಟ್ರದ ಉದಗೀರ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.
‘ಬಂಧಿತರು ಕೃತ್ಯ ಎಸಗುವುದಕ್ಕೂ ಮುನ್ನ ಮೂರ್ನಾಲ್ಕು ದಿನ ನ್ಯಾಯಾಧೀಶರ ಮನೆಯ ಸುತ್ತ ಓಡಾಡಿ ಪ್ರತಿಯೊಂದು ಗಮನಿಸಿದ್ದಾರೆ. ಪ್ರತಿದಿನ ಅವರು ಮಹಾರಾಷ್ಟ್ರದಿಂದ ರೈಲಿನಲ್ಲಿ ಬಂದು ಹೋಗುತ್ತಿದ್ದರು. ಕೃತ್ಯ ಎಸಗಿದ ದಿನ ತೆಲಂಗಾಣದ ವಿಕಾರಾಬಾದ್‌ನಲ್ಲೂ ಕಳ್ಳತನ ಮಾಡಿದ್ದಾರೆ. ಪಾರ್ದಿ ಗ್ಯಾಂಗ್‌ನವರು ಹಲವು ಅಪರಾಧ ಪ್ರಕರಣಗಳಲ್ಲಿ ಶಾಮಿಲಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಅಬಕಾರಿ ಪ್ರಕರಣಗಳೂ ಇವೆ. ನೆರೆಯ ರಾಜ್ಯಗಳಲ್ಲಿ ಇವರ ವಿರುದ್ಧ ಯಾವುದಾದರೂ ಪ್ರಕರಣ ದಾಖಲಾಗಿವೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಘಟನೆ ನಂತರ ತೆಲಂಗಾಣ ಪೊಲೀಸರ ನೆರವು ಕೂಡ ಪಡೆಯಲಾಗಿತ್ತು. ಆದರೆ, ಅಂತಿಮವಾಗಿ ನಮ್ಮ ಜಿಲ್ಲೆಯ ಪೊಲೀಸರೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನೂತನ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವಿಜಯಕುಮಾರ ನೇತೃತ್ವದಲ್ಲಿ ಅದೇ ಠಾಣೆಯ ಪಿಎಸ್‌ಐ ಪ್ರಭಾಕರ ಪಾಟೀಲ, ಸಿಬ್ಬಂದಿ ಪ್ರಕಾಶ, ಮಲ್ಲಿಕಾರ್ಜುನ, ನಿಂಗಪ್ಪ ಅಲ್ಲಾಪುರ, ಗಾಂಧಿಗಂಜ್ ಠಾಣೆಯ ನವೀನ್, ಗಂಗಾಂಧರ ಮತ್ತು ಇಮ್ರಾನ್ ಅವರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದರು.
‘ರೈಲು ನಿಲ್ದಾಣದ ಮೇಲೂ ನಿಗಾ’
‘ಬೀದರ್ ಜಿಲ್ಲೆಗೆ ಮಹಾರಾಷ್ಟ್ರ ತೆಲಂಗಾಣ ಹೊಂದಿಕೊಂಡಿರುವುದರಿಂದ ಆರೋಪಿಗಳು ರಸ್ತೆ ಮಾರ್ಗವಾಗಿ ಬಂದು ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು. ಅದನ್ನು ತಡೆಯಲೆಂದೇ ಗಡಿಭಾಗದಲ್ಲಿ 24X7 ಆರು ಚೆಕ್‌ಪೋಸ್ಟ್ 5 ಅಂತರ ಜಿಲ್ಲೆ ಚೆಕ್‌ಪೋಸ್ಟ್ ತೆರೆಯಲಾಗಿದೆ. ಜಡ್ಜ್ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ರೈಲು ಮಾರ್ಗ ಬಳಸಿದ್ದರು. ಈಗ ರೈಲು ನಿಲ್ದಾಣದ ಚಟುವಟಿಕೆಗಳ ಮೇಲೂ ಇನ್ನಷ್ಟು ಹೆಚ್ಚಿನ ನಿಗಾ ಇಡಲಾಗುತ್ತದೆ’ ಎಂದು ಎಸ್ಪಿ ಪ್ರದೀಪ್ ಗುಂಟಿ ಹೇಳಿದರು. ರಾತ್ರಿ ಗಸ್ತು ಇನ್ನಷ್ಟು ಬಲಪಡಿಸಲಾಗುವುದು. ‘ಚೀತಾ’ ವಾಹನಗಳು ನಿರಂತರವಾಗಿ ಎಲ್ಲೆಡೆ ಗಸ್ತು ತಿರುಗುತ್ತಿವೆ. ಯಾವುದೇ ರೀತಿಯ ಅಪರಾಧ ಕೃತ್ಯಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.