ADVERTISEMENT

ದೇಶದ ಅಖಂಡತೆಗೆ ಸಂವಿಧಾನ ಕಾರಣ: ಬಸವರಾಜ ಬೊಮ್ಮಾಯಿ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 13:12 IST
Last Updated 9 ಏಪ್ರಿಲ್ 2022, 13:12 IST
ಬಸವಕಲ್ಯಾಣದಲ್ಲಿ ಶನಿವಾರ ನಡೆದ ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಸಿಗೆ ನೀರೆರೆದರು. ಬಿ.ಎಸ್.ಯಡಿಯೂರಪ್ಪ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪ್ರಭು ಚವಾಣ್‌, ಈಶ್ವರ ಖಂಡ್ರೆ, ಶರಣು ಸಲಗರ ಉಪಸ್ಥಿತರಿದ್ದರು
ಬಸವಕಲ್ಯಾಣದಲ್ಲಿ ಶನಿವಾರ ನಡೆದ ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಸಿಗೆ ನೀರೆರೆದರು. ಬಿ.ಎಸ್.ಯಡಿಯೂರಪ್ಪ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪ್ರಭು ಚವಾಣ್‌, ಈಶ್ವರ ಖಂಡ್ರೆ, ಶರಣು ಸಲಗರ ಉಪಸ್ಥಿತರಿದ್ದರು   

ಬಸವಕಲ್ಯಾಣ: ‘ಹಲವು ಜಾತಿ, ಧರ್ಮ ಮತ್ತು ಭಾಷೆಗಳನ್ನಾಡುವ ಜನರಿದ್ದರೂ ಭಾರತ ಅಖಂಡವಾಗಿದೆ. ಇದಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೊಡ್ಡ ದೊಡ್ಡ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿಪೆಟ್ಟು ಬಿದ್ದಿದೆ. ಆದರೆ, ಡಾ.ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದ್ದರಿಂದ ಹಾಗೂ ದುರ್ಬಲರ ಸಬಲೀಕರಣದ ಅರ್ಥ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡಿದ ಕಾರಣ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದೆ. ಈ ಕಾರಣಕ್ಕಾಗಿ ಅವರಿಗೆ ಎಲ್ಲರೂ ಚಿರರುಣಿಯಾಗಿರಬೇಕು’ ಎಂದರು.

ADVERTISEMENT

‘ಅಂಬೇಡ್ಕರ್ ಬರೀ ವ್ಯಕ್ತಿ ಅಲ್ಲ; ಸ್ವಾಭಿಮಾನದ ಸಂಕೇತ. ಇಲ್ಲಿನ ಉಪ ಚುನಾವಣೆಗೆ ಬಂದಾಗ ಇದೇ ಸ್ಥಳದಲ್ಲಿ ಬಟ್ಟೆಯಿಂದ ಮುಚ್ಚಿದ್ದ ಪುತ್ಥಳಿಯ ಎದುರು ನಡೆದ ಅಂಬೇಡ್ಕರ್ ಜಯಂತಿಯಲ್ಲಿ ನಾನು ಭಾಗವಹಿಸಿದ್ದೆ. ಆಗ ಶೀಘ್ರದಲ್ಲಿ ಪುತ್ಥಳಿ ಅನಾವರಣಗೊಳಿಸೋಣ ಎಂದು ಭರವಸೆ ಕೊಟ್ಟಿದ್ದೆ. ನನ್ನ ಹಸ್ತದಿಂದಲೇ ಈ ಕಾರ್ಯಕ್ರಮ ನೆರವೇರಿರುವುದು ನನ್ನ ಪುಣ್ಯ. ನಗರಸಭೆಯು ಈ ಕಾರ್ಯಕ್ಕಾಗಿ ₹22 ಲಕ್ಷ ದೇಣಿಗೆ ನೀಡಿ ಉತ್ತಮ ಕಾರ್ಯಮಾಡಿದೆ’ ಎಂದರು.

‘ದುರ್ಬಲರ ಸಬಲೀಕರಣವೇ ಸರ್ಕಾರದ ಧ್ಯೇಯವಾಗಿದ್ದು, ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವುದಕ್ಕೆ ಸತತವಾಗಿ ಪ್ರಯತ್ನಿಸಲಾಗುತ್ತಿದೆ. ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಲ್ಲಿ ₹28000 ಕೋಟಿ ಅನುದಾನ ಹಾಗೂ ಮಹಿಳೆಯರಿಗಾಗಿ ಸ್ವಸಹಾಯ ಸಂಘಗಳಿಗೆ ₹500 ಕೋಟಿ ಅನುದಾನ ನೀಡಲಾಗಿದೆ’ ಎಂದರು.

ಶಾಸಕ ಶರಣು ಸಲಗರ ಮಾತನಾಡಿ,‘ಅಂಬೆಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಹಕ್ಕುಗಳಿಂದಾಗಿ ಬಡ ಕೂಲಿಕಾರನ ಮಗ ಕೂಡ ಉನ್ನತ ಹುದ್ದೆಗೆ ಹೋಗಬಹುದು ಎಂಬ ಕನಸು ಕಾಣುವಂತಾಗಿದೆ. ನಗರದಲ್ಲಿನ ಪುತ್ಥಳಿಯೊಂದು ಮುಖ್ಯಮಂತ್ರಿಯವರ ಹಸ್ತದಿಂದ ಇದೇ ಮೊದಲ ಸಲ ಅನಾವರಣಗೊಳ್ಳುತ್ತಿದೆ. ಇಲ್ಲಿನ ಅನುಭವ ಮಂಟಪ, ಪರುಷಕಟ್ಟೆ, ಶಿವಾಜಿ ಪಾರ್ಕ್, ತ್ರಿಪುರಾಂತ ಕೆರೆ ಕಾಮಗಾರಿಗೆ ಚಾಲನೆ ದೊರೆತಿದೆ’ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಚಿವ ಪ್ರಭು ಚವಾಣ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರುಗಳಾದ ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪುರ, ರಹೀಂ ಖಾನ್, ವಿಧಾನಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪುರೆ, ಅರವಿಂದ ಅರಳಿ, ಭೀಮರಾವ್ ಪಾಟೀಲ, ಶಶೀಲ್ ನಮೋಶಿ, ಮರಾಠಾ ನಿಗಮದ ಅಧ್ಯಕ್ಷ ಎಂ.ಜಿ.ಮುಳೆ, ದಲಿತ ಮುಖಂಡ ರವೀಂದ್ರ ಗಾಯಕವಾಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಶಿರಗಾಪುರ, ನಗರಸಭೆ ಅಧ್ಯಕ್ಷೆ ಶಹಾಜಹಾನಾ ತನ್ವೀರ್ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.