ಬೀದರ್: ‘ಯಾವುದೇ ಮುನ್ಸೂಚನೆ ನೀಡದೆ ಸಾಮಾನ್ಯ ಸಭೆ ಮುಂದೂಡಲಾಗಿದೆ’ ಎಂದು ಆರೋಪಿಸಿ ಕೆಲ ಸದಸ್ಯರು ಇಲ್ಲಿನ ನಗರಸಭೆ ಕಚೇರಿಯ ಮುಖ್ಯ ಗೇಟ್‌ಗೆ ಬುಧವಾರ ಬೀಗ ಜಡಿದು ಕೆಲಕಾಲ ಪ್ರತಿಭಟನೆ ನಡೆಸಿದರು.
‘ಬುಧವಾರ ಸಾಮಾನ್ಯ ಸಭೆ ನಿಗದಿಪಡಿಸಲಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸ್ಪಂದನ ಇರುವುದರಿಂದ ಸಭೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ನೋಟಿಸ್ ಕೊಡದೆ ಈ ರೀತಿ ಏಕಾಏಕಿ ಮುಂದೂಡಿರುವುದು ಸರಿಯಲ್ಲ. ನಾವು ಜನರ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆಗೆ ಬರುತ್ತೇವೆ. ಆದರೆ, ಯಾವುದೋ ನೆಪವೊಡ್ಡಿ ಸಭೆ ಮುಂದೂಡಿರುವುದು ಸರಿಯಲ್ಲ’ ಎಂದು ಸದಸ್ಯರು ಆಕ್ಷೇಪಿಸಿದರು.
ಬಿಜೆಪಿ ಸದಸ್ಯರಾದ ಶಶಿಧರ ಹೊಸಳ್ಳಿ, ರಾಜರಾಮ, ಎಐಎಂಐಎಂನ ಮುನ್ನಾ ಸೇರಿದಂತೆ ಇತರರಿದ್ದರು.
ಈ ಸಂಬಂಧ ನಗರಸಭೆ ಪೌರಾಯುಕ್ತ ಶಿವರಾಜ ರಾಥೋಡ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಮಾ. 13ರಂದು ಕರೆಯಲಾಗಿದ್ದ ಸಭೆ ಜನಸ್ಪಂದನದ ಕಾರಣದಿಂದ ಮುಂದೂಡಲಾಗಿದೆ ಎಂದು ಅಧ್ಯಕ್ಷರು ಎಲ್ಲ ಸದಸ್ಯರಿಗೂ ಮುಂಚೆಯೇ ನೋಟಿಸ್ ಕಳಿಸಿದ್ದಾರೆ. ಸಹಿ ಪಡೆದುಕೊಂಡು ನೋಟಿಸ್ ಸ್ವೀಕರಿಸಿದ್ದು ಇದೆ. ಆದರೂ ಪ್ರತಿಭಟನೆ ನಡೆಸಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.