ADVERTISEMENT

ಕಾರಂಜಾ ಸಂತ್ರಸ್ತರಿಗೆ ಎಕರೆಗೆ ₹ 20 ಲಕ್ಷ ಪರಿಹಾರ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:55 IST
Last Updated 3 ಜುಲೈ 2020, 16:55 IST
ಕರ್ನಾಟಕ ರಾಜ್ಯ ರೈತ ಸಂಘದ ಸಿದ್ರಾಮಪ್ಪ ಆಣದೂರೆ ನೇತೃತ್ವದ ಬಣದ ಮುಖಂಡರು ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದ ಬಳಿ ಶುಕ್ರವಾರ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕರ್ನಾಟಕ ರಾಜ್ಯ ರೈತ ಸಂಘದ ಸಿದ್ರಾಮಪ್ಪ ಆಣದೂರೆ ನೇತೃತ್ವದ ಬಣದ ಮುಖಂಡರು ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದ ಬಳಿ ಶುಕ್ರವಾರ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್: ಕಾರಂಜಾ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ ₹ 20 ಲಕ್ಷ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಿದ್ರಾಮಪ್ಪ ಆಣದೂರೆ ನೇತೃತ್ವದ ಬಣದ ಮುಖಂಡರು ಆಗ್ರಹಿಸಿದರು.

ಭಾಲ್ಕಿ ತಾಲ್ಲೂಕಿನ ಬಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದ ಬಳಿ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ನಿಯೋಗದಲ್ಲಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.

ಒಂದೆಡೆ ಭೂಮಿ ಕಳೆದುಕೊಂಡವರಿಗೆ ನ್ಯಾಯಸಮ್ಮತ ಪರಿಹಾರ ಕೊಟ್ಟಿಲ್ಲ. ಮತ್ತೊಂದೆಡೆ ಬಹುತೇಕ ಸಂತ್ರಸ್ತರಿಗೆ ಮನೆ ಹಕ್ಕು ಪತ್ರ ನೀಡಿಲ್ಲ. ಪುನರ್ ವಸತಿ ಕಾಲೊನಿಯಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆಯಾಗಿವೆ. ಸರ್ಕಾರ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಿದ್ರಾಮಪ್ಪ ಆಣದೂರೆ, ಶ್ರೀಮಂತ ಬಿರಾದಾರ, ದಯಾನಂದ ಸ್ವಾಮಿ ಸಿರ್ಸಿ ಮೊದಲಾದವರು ಇದ್ದರು.

ಗೋದಾವರಿ ನೀರು ಬಳಸಿಕೊಳ್ಳಿ: ಜಿಲ್ಲೆಯನ್ನು ಬರಮುಕ್ತಗೊಳಿಸಲು ಗೋದಾವರಿ ಜಲಾನಯನ ಪ್ರದೇಶದ ಜಿಲ್ಲೆಯ ಪಾಲಿನ ಸಂಪೂರ್ಣ ನೀರು ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದ ಬಣದ ಮುಖಂಡರು ಬೀದರ್‌ನಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.

ಗ್ರಾಮಕ್ಕೊಂದು ಕೆರೆ ನಿರ್ಮಿಸಬೇಕು. ಕಾರಂಜಾ ಜಲಾಶಯಕ್ಕೆ ನೀರಿನ ಒಳ ಹರಿವು ಕಡಿಮೆ ಇರುವುದರಿಂದ ಮಾಂಜ್ರಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಬೇಕು. ಚುಳಕಿ ನಾಲಾಕ್ಕೂ ಏತ ನೀರಾವರಿ ಮೂಲಕ ನೀರು ತುಂಬಬೇಕು. ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕರೆ ನಿರ್ಮಿಸಿ ನೀರು ತುಂಬಿಸಲು ಯೋಜನೆ ರೂಪಿಸಬೇಕು ಎನ್ನುವುದು ಸೇರಿ 8 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಮಲ್ಲಿಕಾರ್ಜುನ ಸ್ವಾಮಿ, ನಾಗಶೆಟ್ಟಿ ಲಂಜವಾಡೆ, ಕಾಸಿಂ ಅಲಿ, ವಿಠ್ಠಲರೆಡ್ಡಿ ಆಣದೂರ ಹಾಗೂ ಶರಣಪ್ಪ ಕಂದಗೂಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.