ADVERTISEMENT

ಕಾಂಗ್ರೆಸ್ ಕಾರ್ಯಕರ್ತರ ಗದ್ದಲ: ದೂರು–ಪ್ರತಿದೂರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:46 IST
Last Updated 8 ಅಕ್ಟೋಬರ್ 2024, 15:46 IST
ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ ಬಿ. ಪಟ್ಟಣದ ಪುರಸಭೆಯ ಬಾಗಿಲು ಬಂದ್ ಮಾಡಿರುವುದು
ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ ಬಿ. ಪಟ್ಟಣದ ಪುರಸಭೆಯ ಬಾಗಿಲು ಬಂದ್ ಮಾಡಿರುವುದು   

ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ್(ಬಿ) ಪುರಸಭೆಯ ಅಧ್ಯಕ್ಷ–ಉಪಾಧ್ಯಕ್ಷರ ನೂತನ ಕೊಠಡಿ ಉದ್ಘಾಟನೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟ ನಡೆಯಿತು. ಬಳಿಕ ಎರಡೂ ಕಡೆಯಿಂದ ದೂರು–ಪ್ರತಿದೂರು ದಾಖಲಾಯಿತು.

ಉದ್ಘಾಟನೆ ಕಾರ್ಯಕ್ರಮವು ಶಿಷ್ಟಾಚಾರದಂತೆ ನಡೆದಿಲ್ಲ ಎಂದು ಆರೋಪಿಸಿ, ಬಿಜೆಪಿ ಡಾ.ಶಾಸಕ ಸಿದ್ದಲಿಂಗಪ್ಪ ಪಾಟೀಲ ಬೆಂಬಲಿಗರು ಹಾಗೂ ಹಳಿಖೇಡ್(ಬಿ) ಪುರಸಭೆಯ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದರು.

ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ ಅವರು ಕೊಠಡಿ ಉದ್ಘಾಟಿಸಿ, ಪುರಸಭೆಯ ಎದುರು ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಬಂದರು. ರಾಜಶೇಖರ ಪಾಟೀಲ ಅವರು ತಮ್ಮ ಭಾಷಣ ಮುಗಿಸಿ ಕುಳಿತರು. ಇದೇ ವೇಳೆ ಬಿಜೆಪಿ ಪುರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಪುರಸಭೆಯ ಬಾಗಿಲು ಬಂದ್ ಮಾಡಿ ಧಿಕ್ಕಾರ ಕೂಗಿದರು.

ADVERTISEMENT

ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ನೇರವಾಗಿ ಬಿಜೆಪಿ ಕಾರ್ಯಕರ್ತರ ಬಳಿ ಬಂದು, ‘ಬಾಗಿಲು ಏಕೆ ಬಂದ್‌ ಮಾಡಿದ್ದೀರಿ? ಎಂದು ಕೇಳಿದ್ದಾರೆ. ಇದರಿಂದಾಗಿ ಬಿಜೆಪಿ–ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ನೂಕುನುಗ್ಗಲು ಉಂಟಾಯಿತು. ಇದರಿಂದ ಕೆರಳಿದ ಕಾಂಗ್ರೆಸ್‌ ಕಾರ್ಯಕರ್ತರು, ಪ್ರತಿಭಟನೆ ನಡೆಸಿದರು. ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹಾಗೂ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು. ದಲಿತ ಮಹಿಳೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿದರು. ನಂತರ ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡರ, ಸಿಪಿಐ ಗುರು ಪಾಟೀಲ ಅವರು, ‘ಸ್ಥಳಕ್ಕೆ ಬಂದು ಘಟನೆ ತಿಳಿಗೊಳಿಸಿದರು.

ನಂತರ ಮಾಜಿ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ‘ದಲಿತ ಮಹಿಳೆ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಮುಸ್ಲಿಂ ಸಮುದಾಯದ ಮಹಿಳೆ ಆಯ್ಕೆಯಾಗಿದ್ದಾರೆ. ಈ ಎರಡೂ ಸಮುದಾಯದವರು ಅಧಿಕಾರಿ ಮಾಡಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ನಾವು ಕಾನೂನು ಉಲ್ಲಂಘನೆ ಮಾಡಿಲ್ಲ. ನಮ್ಮ ಇಬ್ಬರು ಪರಿಷತ್ ಸದಸ್ಯರು ಇದ್ದಾರೆ. ನಾವು ಉದ್ಘಾಟನೆ ಮಾಡಿದ್ದೇವೆ. ಶಾಸಕರೇ(ಡಾ. ಸಿದ್ದಲಿಂಗಪ್ಪ ಪಾಟೀಲ) ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರಿಂದ ಮನವಿ..

ಕೊಠಡಿ ಉದ್ಘಾಟನೆ ಕಾರ್ಯಕ್ರಮವನ್ನು ಶಿಷ್ಟಾಚಾರದಂತೆ ನಡೆಸಬೇಕು. ಆದರೆ ನೀವು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಮನಬಂದಂತೆ ಅವಕಾಶ ಮಾಡಿಕೊಟ್ಟಿದ್ದೀರಿ. ಇದು ಕಾನೂನಿನ ವಿರುದ್ಧವಾಗಿದೆ. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಹಳಿಖೇಡ್ ಬಿ. ಪುರಸಭೆ ಮುಖ್ಯಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾ.ಪಂ ಮಾಜಿ ಸದಸ್ಯ ಅರುಣ ಬಾವಗಿ, ಪುರಸಭೆ ಸದಸ್ಯರಾದ ರವೀಂದ್ರ ಓಲದೋಡ್ಡಿ, ನರಸಿಂಗ ಟಿ. ‌ಸಗರ, ಸುನೀಲ ಕೆ. ಮರಪಳ್ಳಿ, ಸಂಜು ಪ್ರಭಾ, ವೇದಪ್ರಕಾಶ, ಮುರಳಿ ಸೇರಿದಂತೆ ಇತರರು ಹಾಜರಿದ್ದರು.

ಕಾಂಗ್ರೆಸ್‌ನಿಂದ ಠಾಣೆಗೆ ದೂರು..

ಹಳ್ಳಿಖೇಡ್ ಬಿ. ಪುರ‌ಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಕೊಠಡಿ ಉದ್ಘಾಟನೆ ಕಾರ್ಯಕ್ರಮ ಮುಗಿಸಿ ವೇದಿಕೆ ಕಾರ್ಯಕ್ರಮ ಮಾಡುತ್ತಿರುವಾಗ ರೇವಪ್ಪ, ಅರುಣ ಬಾವಗಿ, ಪ್ರಕಾಶ ತಿಬಶಟ್ಟಿ, ಕಲ್ಪಪ್ಪ , ಸುನಿಲ, ಘಾಳೆಪ್ಪ ಸೇರಿದಂತೆ ಒಟ್ಟು 15 ಜನರು ಬಂದು ಪುರಸಭೆ ಬಾಗಿಲು ಮುಚ್ಚಿ ಯಾರಿಗೆ ಕೇಳಿ ಈ ಸಭೆ ಮಾಡುತ್ತಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಳಿಖೇಡ್ ಬಿ. ಪಟ್ಟಣದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ ಅವರ ವಿರುದ್ಧ ಕಾನೂನಿನ ಕ್ರಮಕೈಗೊಳ್ಳಬೇಕು ಎಂದು ಮಲ್ಲಿಕಾರ್ಜುನ ಪ್ರಭಾ, ನಾಗರಾಜ ಹಿಬಾರೆ, ವೀರಶೆಟ್ಟಿ ದೊಡ್ಡಮನಿ, ಆರೀಫ್ ಸೇರಿದಂತೆ ಇತರರು ಹಳಿಖೇಡ್ ಬಿ. ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಹಳಿಖೇಡ್ ಬಿ. ಪುರಸಭೆ ಎದುರುಗಡೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಹಳಿಖೇಡ್ ಬಿ. ಪುರಸಭೆಯ ಬಿಜೆಪಿ ಸದಸ್ಯರು ಹಾಗೂ ಮುಖಂಡರಿಂದ ಅಧಿಕಾರಿಗೆ ಮನವಿ ಸಲ್ಲಿಸಿದರು
ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ನೂಕುನುಗ್ಗಲು ಉಂಟಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.