ADVERTISEMENT

ದೇಶದ್ರೋಹ ಪ್ರಕರಣ| ಕಾಂಗ್ರೆಸ್‌ನಿಂದ ರಾಜಕೀಯ: ಸಂಸದ ಭಗವಂತ ಖೂಬಾ ಆರೋಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 15:11 IST
Last Updated 17 ಫೆಬ್ರುವರಿ 2020, 15:11 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ದೇಶದ್ರೋಹ ಪ್ರಕರಣದ ಆರೋಪಿಗಳನ್ನು ಭೇಟಿ ಮಾಡಿ ಬೆಂಬಲಿಸುವ ಮೂಲಕ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ’ ಎಂದು ಸಂಸದ ಭಗವಂತ ಖೂಬಾ ಆರೋಪಿಸಿದರು.

‘ಸಂಸತ್ತು ಅಂಗೀಕರಿಸಿದ ಸಿಎಎ ಕಾನೂನನ್ನು ವಿರೋಧಿಸುವ ಮೂಲಕ ಅಲ್ಪಸಂಖ್ಯಾತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ’ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಿಪಿಎಂ ಪಾಲಿಟ್‌ ಬ್ಯುರೊ ಸದಸ್ಯೆ ಬೃಂದಾ ಕಾರಟ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಅಸಾದುದ್ದೀನ್‌ ಒವೈಸಿ ಅವರು ಜಿಲ್ಲಾ ಕಾರಾಗೃಹಕ್ಕೆ ತೆರಳಿ ದೇಶ ದ್ರೋಹ ಆರೋಪ ಎದುರಿಸುತ್ತಿರುವವರನ್ನು ಭೇಟಿಯಾಗಿರುವುದು ಖಂಡನೀಯ’ ಎಂದರು.

ADVERTISEMENT

‘ಪೊಲೀಸರು ಸರಿಯಾದ ಕ್ರಮ ಕೈಗೊಂಡಿದ್ದು, ಸಮರ್ಥವಾಗಿ ತನ್ನ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಪೊಲೀಸ್‌ ಇಲಾಖೆಯ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಪ್ರಕರಣ ನಡೆದು 20 ದಿನಗಳು ಕಳೆದರೂ ಪೊಲೀಸರು ಶಾಹೀನ್‌ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳನ್ನು ಬಂಧಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಫೆಬ್ರುವರಿ 19 ರಂದು ಬೆಳಿಗ್ಗೆ 11 ಗಂಟೆಗೆ ಬೀದರ್‌ನ ಝೀರಾ ಫಂಕ್ಷನ್‌ ಹಾಲ್‌ನಲ್ಲಿ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರ ಪದಗ್ರಹಣ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಈಶ್ವರಸಿಂಗ್‌ ಠಾಕೂರ್, ವಿಜಯಕುಮಾರ ಕಾಂಗೆ, ಹಣಮಂತ ಬುಳ್ಳಾ, ಬಸವರಾಜ ಜೋಜನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.