ಸತತ ಮಳೆಗೆ ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದ ಹೊಲವೊಂದರಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ
ಬೀದರ್: ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆಲದಲ್ಲಿ ತೇವಾಂಶ ಹೆಚ್ಚಾಗಿದ್ದು, ಬಿತ್ತನೆ ಕಾರ್ಯದ ಸಿದ್ಧತೆಗೆ ಹಿನ್ನಡೆ ಉಂಟಾಗಿದೆ.
ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದಿತ್ತು. ಮೇ ಮೊದಲ ವಾರದಲ್ಲಿ ಗುಡುಗು ಸಹಿತ ಮಳೆಯಾಗಿತ್ತು. ಎರಡನೇ ವಾರದಿಂದ ಬಿಡುವಿಲ್ಲದೆ ಮಳೆಯಾಗುತ್ತಿದೆ. ಇದರ ಪರಿಣಾಮ ಜಮೀನಿನಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದೆ. ತಗ್ಗು ಪ್ರದೇಶಗಳಲ್ಲಿರುವ ಅನೇಕ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಯಾವುದೇ ರೀತಿಯ ಸಿದ್ಧತೆ ಮಾಡಲಾರದ ಪರಿಸ್ಥಿತಿ ಸೃಷ್ಟಿಯಾಗಿದೆ.
ರೈತರು ಸಾಮಾನ್ಯವಾಗಿ ಮೇ ತಿಂಗಳ ಎರಡನೇ ವಾರದಿಂದ ತಿಂಗಳ ಕೊನೆಯ ವರೆಗೆ ಜಮೀನು ಹದಗೊಳಿಸುತ್ತಾರೆ. ಪ್ರಖರವಾದ ಬಿಸಿಲಿಗೆ ಜಮೀನಿನಲ್ಲಿ ಎಳ್ಳಷ್ಟು ತೇವಾಂಶ ಇರುವುದಿಲ್ಲ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಜಮೀನಿನಲ್ಲಿ ತೇವಾಂಶ ಇಲ್ಲದಿದ್ದರೆ ಉತ್ತಮ ಬೆಳೆ ಬರುತ್ತದೆ ಎನ್ನುವುದು ರೈತರ ನಂಬಿಕೆ. ಕೃಷಿ ವಿಜ್ಞಾನಿಗಳು ಕೂಡ ಈ ವಾದವನ್ನು ಒಪ್ಪುತ್ತಾರೆ.
ಈಗ ಇದೇ ವಿಷಯ ರೈತರ ಚಿಂತೆಗೆ ಕಾರಣವಾಗಿದೆ. ‘ಮಳೆ ಬೇಕೆಂದಾಗ ಸುರಿಯುವುದಿಲ್ಲ, ಬೇಡವಾದಾಗ ಸುರಿಯುತ್ತಿದೆ. ಹೀಗಾದರೆ ರೈತಾಕಿ ಮಾಡುವುದಾದರೂ ಹೇಗೆ ಎನ್ನುತ್ತಾರೆ’ ಅನ್ನದಾತರು.
‘ನೆಲ ಕಾದು ಕಾದು ಅದರೊಳಗಿನ ಹಸಿ ಹೋಗಬೇಕು. ನೆಲ ಬೇದಿಗೆ ಬರಬೇಕು. ಕಿರಕತ್‌ನಲ್ಲಿ ಬಿಸಿಲು ಉತ್ತಮವಾಗಿದ್ದರೆ ಉತ್ತಮ ಮಳೆ ಬರುತ್ತದೆ. ಇಲ್ಲವಾದರೆ ಸರಿಯಾಗಿ ಮೊಳಕೆ ನಾಟಿ ಬರಲ್ಲ. ಅಕಾಲಿಕ ಮಳೆಗೆ ಸಮಸ್ಯೆ ಆಗಬಹುದು. ಸತತ ಮಳೆಗೆ ನೆಲ ತಣ್ಣಗಾಗಿದೆ. ತೇವಾಂಶ ಹೆಚ್ಚಾಗಿದೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಈ ಸಲ ಬೇಸಿಗೆಯಲ್ಲಿ ಬಹಳ ಬಿಸಿಲು ಇದ್ದದ್ದರಿಂದ ಮಳೆಯಾದರೂ ಹೆಚ್ಚಿನ ಸಮಸ್ಯೆಯಾಗಲ್ಲ. ಕೆಲವೆಡೆ ಸಾಕಷ್ಟು ಹೆಚ್ಚಿನ ಮಳೆಯಾಗಿದ್ದು, ತೇವಾಂಶ ಹೋಗಲು ಸಮಯ ಹಿಡಿಯಬಹುದು. ಆದರೆ, ಬಿಡುವು ಕೊಟ್ಟಾಗ ನೆಲ ಹದ ಮಾಡಬೇಕು. ಮುಂಗಾರು ಹಂಗಾಮಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುವುದು’ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಬಿಸಿಲು ಉತ್ತಮವಾಗಿದ್ದರೆ ಉತ್ತಮ ಬೆಳೆ ಬರುತ್ತದೆ. ಅಕಾಲಿಕ ಮಳೆ ಹೀಗೆ ಸುರಿದರೆ ಬೆಳೆ ಸರಿಯಾಗಿ ಬರುವುದಿಲ್ಲ.–ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ ರೈತ ಸಂಘ
ಮಳೆ ಬಿಡುವು ಕೊಟ್ಟಾಗ ನೆಲ ಹದ ಮಾಡಿಕೊಂಡು ಆರಲು ಬಿಡಬೇಕು. ಆನಂತರ ಬಿತ್ತನೆ ಮಾಡಿದರೆ ಉತ್ತಮ.–ಜಿಯಾವುಲ್ಲಾ ಜಂಟಿ ಕೃಷಿ ನಿರ್ದೇಶಕ ಕೃಷಿ ಇಲಾಖೆ
‘ಇನ್ನೆರಡು ದಿನ ಮಳೆ’ (ಚಿತ್ರ ಇದೆ–ಬಸವರಾಜ) ‘ಜಿಲ್ಲೆಯಾದ್ಯಂತ ಈಗ ಸುರಿಯುತ್ತಿರುವುದು ಮುಂಗಾರು ಪೂರ್ವ ಮಳೆ. ಈ ಮಳೆ ಇನ್ನೆರಡು ದಿನಗಳ ವರೆಗೆ ಜಿಲ್ಲೆಯಾದ್ಯಂತ ಸುರಿಯಲಿದೆ. ಮೇ 27ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಜೂನ್ 4ರಂದು ಜಿಲ್ಲೆಗೆ ಮುಂಗಾರು ಮಳೆಯ ಆಗಮನವಾಗಲಿದೆ’ ಎಂದು ಕೃಷಿ ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾದ ಕಾರಣ ಭೂಮಿಯಲ್ಲಿ ಸಾಕಷ್ಟು ತೇವಾಂಶ ಇದೆ. ನಾಲ್ಕೈದು ದಿನಗಳವರೆಗೆ ಮಳೆ ಬಿಡುವು ಕೊಟ್ಟು ಬಿಸಿಲು ಬಂದಾಗ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬಹುದು. ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ದೇಸಿ ತಳಿಗಳ ಸಂರಕ್ಷಣೆ ದೇಸಿ ತಳಿಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದಕ್ಕಾಗಿ ಹೋಬಳಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮೇ 31ರೊಳಗೆ ಹೆಸರು ನೋಂದಣಿ ಮಾಡಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದ್ದಾರೆ. ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಗುರುತಿಸಿ ಸಂರಕ್ಷಿಸುವುದು. ಗುರುತಿಸಿದ ದೇಸಿ ತಳಿಗಳನ್ನು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುವುದು. ದೇಸಿ ತಳಿಗಳ ಸಂರಕ್ಷಿಸಿ ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.