ADVERTISEMENT

ಭಾಲ್ಕಿಯ ಯುವ ಗುತ್ತಿಗೆದಾರ ಆತ್ಮಹತ್ಯೆ: ಇಬ್ಬರು ಹೆಡ್‌ ಕಾನ್‌ಸ್ಟೆಬಲ್‌ಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 23:32 IST
Last Updated 27 ಡಿಸೆಂಬರ್ 2024, 23:32 IST
<div class="paragraphs"><p>ಸಚಿನ್‌ ಪಾಂಚಾಳ್‌ (ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ)</p></div>

ಸಚಿನ್‌ ಪಾಂಚಾಳ್‌ (ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ)

   

ಬೀದರ್‌: ಭಾಲ್ಕಿ ತಾಲ್ಲೂಕಿನ ಕಟ್ಟಿಗೂಗಾಂವ್‌ನ ಯುವ ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಆರೋಪದಡಿ ನಗರದ ಗಾಂಧಿ ಗಂಜ್‌ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ಗಳಾದ ರಾಜೇಶ್‌ ಚೆಲ್ವಾ ಹಾಗೂ ಶಾಮಲಾ ಅವರನ್ನು ಶುಕ್ರವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ, ಕಲಬುರಗಿಯ ಕಾಂಗ್ರೆಸ್‌ ಮುಖಂಡ ರಾಜು ಕಪನೂರ ಸೇರಿ ಎಂಟು ಮಂದಿ ಟೆಂಡರ್‌ ವಿಚಾರಕ್ಕೆ ಹಣದ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಚಿನ್‌ ಏಳು ಪುಟಗಳ ಮರಣಪತ್ರ ಬರೆದು, ನಗರದ ಬೀದರ್‌–ಹೈದರಾಬಾದ್‌ ನಡುವಿನ ಹಳಿಯಲ್ಲಿ ಗುರುವಾರ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ADVERTISEMENT

ನಾಪತ್ತೆಯಾಗಿದ್ದ ಸಚಿನ್‌ ಡೆತ್‌ನೋಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಪೋಸ್ಟ್‌ ಮಾಡಿದ್ದನ್ನು ಗಮನಿಸಿದ ಕುಟುಂಬದ ಸದಸ್ಯರು, ಗಾಂಧಿ ಗಂಜ್‌ ಠಾಣೆಗೆ ತೆರಳಿ ಸಚಿನ್‌ನನ್ನು ಹುಡುಕಿಕೊಡುವಂತೆ ದೂರು ನೀಡಲು ಮುಂದಾಗಿದ್ದರು. ಆದರೆ, ಠಾಣೆಯಲ್ಲಿದ್ದ ಹೆಡ್‌ ಕಾನ್‌ಸ್ಟೆಬಲ್‌ಗಳಾದ ರಾಜೇಶ್‌ ಚೆಲ್ವಾ ಮತ್ತು ಶಾಮಲಾ ಎಫ್‌ಐಆರ್‌ ದಾಖಲಿಸಿಕೊಂಡಿರಲಿಲ್ಲ. ಯುವಕ ಕಟ್ಟಿತೂಗಾಂವ್‌ ಗ್ರಾಮದವನಾಗಿದ್ದರಿಂದ ಧನ್ನೂರ ಪೊಲೀಸ್‌ ಠಾಣೆಗೆ ಹೋಗುವಂತೆ ಹೇಳಿ ಕಳುಹಿಸಿದ್ದರು. ದೂರು ಸ್ವೀಕರಿಸದೆ ಕರ್ತವ್ಯಲೋಪ ಎಸಗಿದ ಕಾರಣಕ್ಕೆ ಇಬ್ಬರನ್ನು  ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಚಿನ್‌ ಅವರ ಸಹೋದರಿ ಸವಿತಾ ಅವರು ನೀಡಿರುವ ದೂರು ಆಧರಿಸಿ ರಾಜು ಕಪನೂರ್‌ ಸೇರಿ ಒಂಬತ್ತು ಜನರ ವಿರುದ್ಧ ಬೀದರ್‌ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಡೀ ಪ್ರಕರಣದ ತನಿಖೆಯನ್ನು ಬೀದರ್‌ ರೈಲ್ವೆ ಪೊಲೀಸರು ಮಾಡುತ್ತಿದ್ದಾರೆ. ಅದರ ಬಗ್ಗೆ ನಾನು ಏನೂ ಮಾತನಾಡಲಾರೆ
ಪ್ರದೀಪ್‌ ಗುಂಟಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.