ADVERTISEMENT

ಶಿಕ್ಷಣ ಕ್ಷೇತ್ರಕ್ಕೆ ಕಮಠಾಣೆ ಕೊಡುಗೆ ಅನನ್ಯ

ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 13:13 IST
Last Updated 9 ಅಕ್ಟೋಬರ್ 2021, 13:13 IST
ಬೀದರ್‌ನಲ್ಲಿ ಶನಿವಾರ ವೀರಶೈವ ಲಿಂಗಾಯತ ಸಮಾಜಕ್ಕೆ ನೀಡಿದ ಕೊಡುಗೆಗಾಗಿ ವೈಜಿನಾಥ ಹಾಗೂ ಲಕ್ಷ್ಮೀಬಾಯಿ ಕಮಠಾಣೆ ಅವರನ್ನು ಸನ್ಮಾನಿಸಲಾಯಿತು. ವೈಶಾಲಿ ಕಮಠಾಣೆ, ದಿಲೀಪ್ ಕಮಠಾಣೆ, ಡಾ.ಚಂದ್ರಕಾಂತ ಗುದಗೆ, ಉಮಾಕಾಂತ ನಾಗಮಾರಪಳ್ಳಿ, ಗಂಗಾಂಬಿಕೆ ಪಾಟೀಲ, ಶೀಲಾ ಖೂಬಾ, ಸಚಿವ ಭಗವಂತ ಖೂಬಾ, ಜಯಕುಮಾರ ಕಾಂಗೆ ಇದ್ದಾರೆ
ಬೀದರ್‌ನಲ್ಲಿ ಶನಿವಾರ ವೀರಶೈವ ಲಿಂಗಾಯತ ಸಮಾಜಕ್ಕೆ ನೀಡಿದ ಕೊಡುಗೆಗಾಗಿ ವೈಜಿನಾಥ ಹಾಗೂ ಲಕ್ಷ್ಮೀಬಾಯಿ ಕಮಠಾಣೆ ಅವರನ್ನು ಸನ್ಮಾನಿಸಲಾಯಿತು. ವೈಶಾಲಿ ಕಮಠಾಣೆ, ದಿಲೀಪ್ ಕಮಠಾಣೆ, ಡಾ.ಚಂದ್ರಕಾಂತ ಗುದಗೆ, ಉಮಾಕಾಂತ ನಾಗಮಾರಪಳ್ಳಿ, ಗಂಗಾಂಬಿಕೆ ಪಾಟೀಲ, ಶೀಲಾ ಖೂಬಾ, ಸಚಿವ ಭಗವಂತ ಖೂಬಾ, ಜಯಕುಮಾರ ಕಾಂಗೆ ಇದ್ದಾರೆ   

ಬೀದರ್‌: 'ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ವೈಜಿನಾಥ ಕಮಠಾಣೆ ಅವರ ಕೊಡುಗೆ ಅನನ್ಯವಾಗಿದೆ' ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅಭಿಪ್ರಾಯಪಟ್ಟರು.

ವೀರಶೈವ ಲಿಂಗಾಯತ ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಬಸವ ತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈಜಿನಾಥ ಕಮಠಾಣೆ ಅವರಿಗೆ ನಗರದ ವಿದ್ಯಾನಗರ ಕಾಲೊನಿಯ ವಿ.ಕೆ. ಇಂಟರ್‌ನ್ಯಾಷನಲ್ ಪದವಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಮಠಾಣೆ ಅವರು ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಅದರಿಂದಾಗಿಯೇ ಅವರಿಗೆ ಶಿಕ್ಷಣ ಸಂಸ್ಥೆಯೊಂದನ್ನು ಹುಟ್ಟು ಹಾಕಿ, ಉನ್ನತ ಮಟ್ಟಕ್ಕೆ ಬೆಳೆಸಲು ಸಾಧ್ಯವಾಗಿದೆ ಎಂದು ಹೇಳಿದರು.

ADVERTISEMENT

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಪ್ರತಿಯೊಬ್ಬರೂ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.

ವೈಜಿನಾಥ ಕಮಠಾಣೆ ಅವರು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಅನೇಕ ಪ್ರಶಸ್ತಿ, ಸನ್ಮಾನಗಳು ಹುಡುಕಿಕೊಂಡು ಬಂದಿವೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೈಜಿನಾಥ ಕಮಠಾಣೆ ಅವರು, ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ಆರಂಭಿಸಿದ ಬಸವ ತತ್ವ ಶಿಕ್ಷಣ ಸಂಸ್ಥೆ ತನ್ನ ಉದ್ದೇಶದಲ್ಲಿ ಸಫಲವಾಗಿದೆ. ಸಂಸ್ಥೆಯಲ್ಲಿ ಓದಿದ ಅಸಂಖ್ಯಾತ ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಮುಂದೆಯೂ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ನಿರಂತರ ಶ್ರಮಿಸುವೆ ಎಂದು ತಿಳಿಸಿದರು.

ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕೆ ಅಕ್ಕ ಸಾನಿಧ್ಯ ವಹಿಸಿದ್ದರು. ಕೋವಿಡ್‍ನಿಂದ ಮೃತರಾದ ಪ್ರಾಚಾರ್ಯ ಚಂದ್ರಶೇಖರ ಗಚ್ಚಿನಮಠ, ಮುಖ್ಯ ಶಿಕ್ಷಕ ಪ್ರಕಾಶ ಲಕ್ಕಶೆಟ್ಟೆ ಹಾಗೂ ಎಸ್‍ಡಿಎ ಶ್ರೀದೇವಿ ಲಕ್ಕಶೆಟ್ಟೆ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ಶಾಸಕ ರಹೀಂಖಾನ್, ಶೀಲಾ ಬಿ. ಖೂಬಾ, ಲೇಖಕ ಜ್ಞಾನೇಶ್ವರ ಪೋಕಲವಾರ, ಡಾ.ಚಂದ್ರಕಾಂತ ಗುದಗೆ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಉದ್ಯಮಿ ಜೈರಾಜ್ ಖಂಡ್ರೆ, ಸಾಹಿತಿ ಎಂ.ಜಿ. ದೇಶಪಾಂಡೆ, ಬಿಜೆಪಿ ಎಸ್.ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಯಕುಮಾರ ಕಾಂಗೆ, ಮಹಾದೇವ ಸ್ವಾಮಿ, ಶರಣಪ್ಪ ಬಲ್ಲೂರ, ಗಣಪತರಾವ್ ಖೂಬಾ, ಶಿವಕುಮಾರ ಭಾಲ್ಕೆ, ಬಸವ ತತ್ವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ದಿಲೀಪ್ ಕಮಠಾಣೆ, ನಿರ್ದೇಶಕಿಯರಾದ ಲಕ್ಷ್ಮೀಬಾಯಿ ಕಮಠಾಣೆ, ವೈಶಾಲಿ ಕಮಠಾಣೆ, ಸಾಯಿಕುಮಾರ ಕಮಠಾಣೆ, ವಿ.ಬಿ. ಚನಶೆಟ್ಟಿ, ಜಿನ್ಸ್ ಕೆ. ಥಾಮಸ್, ರೋಶನಿ ಕೆ. ಥಾಮಸ್, ಶಿವಲೀಲಾ ಟೊಣ್ಣೆ ಉಪಸ್ಥಿತರಿದ್ದರು.

ಶ್ರೀಮತಿ ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜು ಪ್ರಾಚಾರ್ಯ ಧನರಾಜ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ಮಹಮ್ಮದ್ ಯುನೂಸ್ ನಿರೂಪಿಸಿದರು. ವಿ.ಕೆ. ಇಂಟರ್‌ನ್ಯಾಷನಲ್ ಪದವಿ ಕಾಲೇಜು ಉಪ ಪ್ರಾಚಾರ್ಯ ನಾಗೇಶ ಬಿರಾದಾರ ವಂದಿಸಿದರು.

ವಿ.ಕೆ. ಇಂಟರ್‌ನ್ಯಾಷನಲ್ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಕಾಲೇಜು ಹಾಗೂ ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜು ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.