ADVERTISEMENT

‘ಸಹಕಾರದಿಂದ ಸರ್ವರ ವಿಕಾಸ ಸಾಧ್ಯ’

ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಉಮಾಕಾಂತ ನಾಗಮಾರಪಳ್ಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 14:45 IST
Last Updated 14 ನವೆಂಬರ್ 2019, 14:45 IST
ಬೀದರ್‌ನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿದರು
ಬೀದರ್‌ನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿದರು   

ಬೀದರ್: ‘ಸಹಕಾರ ಕ್ಷೇತ್ರದ ಮೂಲಕ ಸರ್ವರ ವಿಕಾಸ ಸಾಧ್ಯವಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅಭಿಪ್ರಾಯಪಟ್ಟರು.

ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಭಿವೃದ್ಧಿಗೆ ನೆರವಾಗುವ ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಕ್ಷೇತ್ರ ಹಾಸು ಹೊಕ್ಕಿದೆ. ಸಕ್ಕರೆ, ಜವಳಿ ಉದ್ಯಮಗಳು ಬೆಳೆದಿರುವುದೇ ಸಹಕಾರ ಕ್ಷೇತ್ರದಲ್ಲಿ. ಗೊಬ್ಬರ ತಯಾರಿಕೆಗೆ ಹೆಸರಾದ ಇಫ್ಕೋ ಸಹಕಾರ ತತ್ವದಡಿ ನಡೆಯುತ್ತಿದೆ. ಸಹಕಾರ ಕ್ಷೇತ್ರದಲ್ಲಿನ ಬ್ಯಾಂಕ್‌ಗಳು ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಹಕಾರ ತತ್ವದಡಿ ನಡೆಯುತ್ತಿರುವ ಹಾಲು ಒಕ್ಕೂಟಗಳೂ ರೈತರ ಏಳಿಗೆಗೆ ಮಹತ್ವದ ಕೊಡುಗೆ ನೀಡುತ್ತಿವೆ’ ಎಂದು ಹೇಳಿದರು.

ADVERTISEMENT

‘ದೇಶದ ಅಭಿವೃದ್ಧಿಯ ವೇಗ ಹೆಚ್ಚಿಸುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಹಿರಿದಾಗಿದೆ. ಶತಮಾನದ ಇತಿಹಾಸ ಹೊಂದಿರುವ ಸಹಕಾರ ಕ್ಷೇತ್ರ ಇನ್ನಷ್ಟು ಬೆಳೆಯಬೇಕಾಗಿದೆ’ ಎಂದು ತಿಳಿಸಿದರು.

‘ಆರಂಭದ ದಿನಗಳಲ್ಲಿ ಹಲವು ಮಿತಿಗಳಿದ್ದವು. ಚೌಕಟ್ಟಿನ ಒಳಗೆಯೇ ಕೆಲಸ ಮಾಡುವ ಸ್ಥಿತಿ ಇತ್ತು. ಸ್ವಾಮಿನಾಥನ್ ವರದಿ ಮತ್ತು 2012 ರ ಕಾಯ್ದೆ ತಿದ್ದುಪಡಿ ನಂತರ ಸಹಕಾರ ಕ್ಷೇತ್ರ ಹೆಚ್ಚು ಬಲಿಷ್ಠವಾಗಿದೆ. ಸ್ವಾಯತ್ತ ಸಂಸ್ಥೆಯಾಗಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ’ ಎಂದರು.

‘ಸಹಕಾರ ಕ್ಷೇತ್ರದ ಸಂಸ್ಥೆಗಳು ಬೆಳೆಯಲು ಬದ್ಧತೆ, ಕಾಳಜಿ ಹಾಗೂ ಪ್ರಾಮಾಣಿಕತೆ ಬೇಕು’ ಎಂದು ಹೇಳಿದರು.

‘ದಿ. ನಾಗಮಾರಪಳ್ಳಿ ಅವರು ರಚಿಸಿದ ಸ್ವಸಹಾಯ ಗುಂಪುಗಳು ದೇಶ ವಿದೇಶಗಳ ಗಮನ ಸೆಳೆಯುವ ರೀತಿಯಲ್ಲಿ ಬೆಳೆದಿವೆ. ಜಿಲ್ಲೆಯಲ್ಲಿ 4.10 ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿದ್ದಾರೆ. ಗುಂಪುಗಳ ವಹಿವಾಟು ₹ 900 ಕೋಟಿ ದಾಟಿದೆ. ವಾರದ ಉಳಿತಾಯ ₹ 130 ಕೋಟಿ ಆಗಿದೆ’ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪರಮೇಶ್ವರ ಮುಗಟೆ ಮಾತನಾಡಿ, ‘ಬರುವ ವರ್ಷದಿಂದ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಉಮಾಕಾಂತ ನಾಗಮಾರಪಳ್ಳಿ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ನೀಡಲಾಗುವುದು. ಮೊದಲ ಬಹುಮಾನ ₹ 11,000, ಎರಡನೇ ಬಹುಮಾನ ₹5,000 ಹಾಗೂ ಮೂರನೇ ಬಹುಮಾನ ₹ 3000 ನಗದು,ಪ್ರಶಸ್ತಿಪತ್ರ ನೀಡಿ ಪ್ರೋತ್ಸಾಹಿಸಲಾಗುವುದು’ ಎಂದು ಪ್ರಕಟಿಸಿದರು.

ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೂಡ್ ಮಾತನಾಡಿದರು.

ಪತ್ರಕರ್ತರಾದ ಭೀಮರಾವ್ ಬುರಾನಪುರ, ಸುರೇಶ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಸಾಧನೆಗಾಗಿ ರೈತರನ್ನು, ರೈತ ಮಹಿಳೆಯನ್ನು ಗೌರವಿಸಲಾಯಿತು.

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಪ್ರಭಾರ ಉಪ ನಿರ್ದೇಶಕ ಮಹಾದೇವ ಸ್ವಾಮಿ, ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ್, ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶಶಿಕುಮಾರ ಪಾಟೀಲ ಸಂಗಮ, ಪ್ರಭಾಕರ ಎನ್., ಸದಾಶಿವ ಪಾಟೀಲ, ರಾಜಕುಮಾರ ಅಣದೂರ, ಅನೀಲ ಪಾಟೀಲ, ಪಂಢರಿರೆಡ್ಡಿ ಇದ್ದರು.

ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಚೆನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು. ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಆರ್. ಮಲ್ಲಮ್ಮ ವಂದಿಸಿದರು.

ಬೀದರ್ ಅರ್ಬನ್ ಸಹಕಾರ ಬ್ಯಾಂಕ್ ಪರವಾಗಿ ಬ್ಯಾಂಕ್ ಅಧ್ಯಕ್ಷ ಮಹಮ್ಮದ್ ಸಲೀಮೊದ್ದಿನ್ ಅವರು ಸಹಕಾರ ಶಿಕ್ಷಣ ನಿಧಿಗೆ ₹ 1.27 ಲಕ್ಷ ಚೆಕ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.