ADVERTISEMENT

ಕೋವಿಡ್ ಹೆಚ್ಚಳ: ಕಡಿಮೆಯಾದ ಜನಸಂಚಾರ

ಪೊಲೀಸರ ಬಲ ಪ್ರಯೋಗ ಇಲ್ಲದಿದ್ದರೂ ರಸ್ತೆಗೆ ಬಾರದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:55 IST
Last Updated 23 ಏಪ್ರಿಲ್ 2021, 4:55 IST
ನಾರಾಯಣಪುರದ ರಸ್ತೆಗಳು ಜನಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು
ನಾರಾಯಣಪುರದ ರಸ್ತೆಗಳು ಜನಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು   

ಬಸವಕಲ್ಯಾಣ: ಕೋವಿಡ್ ಹೆಚ್ಚಳದ ಕಾರಣ ಸರ್ಕಾರ ರಾತ್ರಿ ಹೊತ್ತಿನಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದರೂ ನಗರ ಹಾಗೂ ಕೆಲ ಊರುಗಳಲ್ಲಿ ದಿನದಲ್ಲಿಯೂ ವಾಹನ ಸಂಚಾರ ಹಾಗೂ ಜನಸಂಚಾರ ಕಡಿಮೆ ಆಗಿರುವುದು ಕಂಡುಬಂತು. ಅಗತ್ಯ ಸೇವೆ ಹೊರತುಪಡಿಸಿ ಇತರೆ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು.

ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ ಕಾರಣ ಅನೇಕರು ಗುರುವಾರ ಅಂಗಡಿಗಳನ್ನು ತೆರೆಯಲಿಲ್ಲ. ಆದ್ದರಿಂದ ವ್ಯಾಪಾರ ವಹಿವಾಟು ಅಷ್ಟಕಷ್ಟೇ ನಡೆಯಿತು. ಬಹಳಷ್ಟು ಹೋಟೆಲ್, ಡಾಬಾ, ಖಾನಾವಳಿಗಳಲ್ಲಿ ಬರೀ ಪಾರ್ಸಲ್ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಚಹಾ ಅಂಗಡಿಗಳ ಬಾಗಿಲುಗಳಿಗೆ ದಾರ ಹಾಗೂ ಸಲಾಕೆಗಳನ್ನು ಅಳವಡಿಸಿ ದೂರದಿಂದಲೇ ಚಹಾ, ನೀರು ಕೊಡುತ್ತಿರುವುದು ಕಂಡು ಬಂತು.

ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದ್ದರಿಂದ ಬಸ್‌ಗಳು ಸಂಚರಿಸಿದವು. ಆದರೂ, ಪ್ರತಿ ಬಸ್‌ನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಕಂಡುಬಂದರು. ಎಲ್ಲಿಯೂ ಜನದಟ್ಟಣೆ ಕಾಣಲಿಲ್ಲ. ಜನತೆ ಸ್ವಯಂ ಲಾಕ್‌ಡೌನ್‌ಗೆ ಒಳಗಾದಂಥ ಪರಿಸ್ಥಿತಿ ಇತ್ತು.

ADVERTISEMENT

ಬಂದ್‌ ನಿರ್ಣಯ: ಬಸವಕಲ್ಯಾಣ ನಗರದ ಬಸವಗಂಜನಲ್ಲಿನ ಅಂಗಡಿ ಗಳನ್ನು ಏ.23 ರಿಂದ ಮೇ 4ರವರೆಗೆ ಬಂದ್ ಇಡುವ ನಿರ್ಣಯ ಅಲ್ಲಿನ ವ್ಯಾಪಾರಿಗಳು ತೆಗೆದುಕೊಂಡಿದ್ದಾರೆ. ಕೋವಿಡ್ ಹೆಚ್ಚಳದ ಕಾರಣ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಬಿಕೋ ಎಂದ ರಸ್ತೆಗಳು

ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರ, ಮುಚಳಂಬ, ಮಂಠಾಳಗಳಲ್ಲಿಯೂ ಜನ ಸಂಚಾರ ಕಡಿಮೆ ಆಗಿತ್ತು. ಮಧ್ಯಾಹ್ನ ಈ ಊರುಗಳಲ್ಲಿ ಜನರು ಮನೆಗಳಲ್ಲಿಯೇ ಉಳಿದಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ರಾಷ್ಟ್ರೀಯ ಹೆದ್ದಾರಿಯಲ್ಲೂ ವಾಹನ ಸಂಚಾರ ಕಡಿಮೆ ಆಗಿತ್ತು.

ನಾರಾಯಣಪುರದಲ್ಲಿ ಯಾವುದೇ ಅಂಗಡಿ ಬೆಳಿಗ್ಗೆ ಹಾಗೂ ಸಂಜೆ ತೆರೆದಿಡುವ ನಿರ್ಣಯ ಕೈಕೊಂಡಿದ್ದರಿಂದ ಜನರು ಮನೆಯಿಂದ ಹೊರಗೆ ಬರದಂತಾಗಿದೆ. ಗ್ರಾಮ ಪಂಚಾಯಿತಿಯಿಂದ ರಸ್ತೆಗಳಲ್ಲಿ ಸ್ಯಾನಿಟೈಜರ್ ಕೂಡ ಸಿಂಪಡಿಸಲಾಗಿದೆ.

ತಾಲ್ಲೂಕಿನ ಚಿಟ್ಟಾ(ಕೆ)ದಲ್ಲಿನ ಪ್ರಸಿದ್ಧ ಕಲ್ಲೇಶ್ವರ ದೇವಸ್ಥಾನದ ಪ್ರತಿದಿನದ ಆರಾಧನಾ ಪೂಜೆ ಹಾಗೂ ದಾಸೋಹ ಸ್ಥಗಿತಗೊಳಿಸಿ ಬಾಗಿಲು ಬಂದ್ ಮಾಡಲಾಗಿದೆ. ಕೆಲ ಗ್ರಾಮಗಳಲ್ಲಿನ ದೇವಸ್ಥಾನಗಳಲ್ಲಿಯೂ ಪ್ರವೇಶ ನಿಷೇಧಿಸಿರುವ ಬಗ್ಗೆ ಗೊತ್ತಾಗಿದೆ. ಭೋಸಗಾದಲ್ಲಿ ಗ್ರಾಮ ಪಂಚಾಯಿತಿಯವರು ಸಂಚರಿಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.