ADVERTISEMENT

ಕೋವಿಡ್‌: ಹೊಸ ಪ್ರಕರಣಗಳ ಸಂಖ್ಯೆ 10ಕ್ಕೆ ಇಳಿಕೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್‌ನಿಂದ 6,478 ಮಂದಿ ಗುಣಮುಖ

ಚಂದ್ರಕಾಂತ ಮಸಾನಿ
Published 20 ಅಕ್ಟೋಬರ್ 2020, 15:49 IST
Last Updated 20 ಅಕ್ಟೋಬರ್ 2020, 15:49 IST
ಬ್ರಿಮ್ಸ್‌ ಆಸ್ಪತ್ರೆ
ಬ್ರಿಮ್ಸ್‌ ಆಸ್ಪತ್ರೆ   

ಬೀದರ್: ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆಯೂ ಒಂದಂಕಿಗೆ ಇಳಿದಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಂಗಳವಾರ ಜಿಲ್ಲೆಯಲ್ಲಿ 10 ಹೊಸ ಪ್ರಕರಣಗಳು ಮಾತ್ರ ಪತ್ತೆಯಾಗಿವೆ

ಬೇಸಿಗೆಯಲ್ಲಿ ಬೀದರ್‌ನ ಓಲ್ಡ್‌ಸಿಟಿಯಲ್ಲೇ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದವು. ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿತ್ತು. ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜತೆಗೆ ಸಕಾಲದಲ್ಲಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸಿ ಗುಣಮುಖರಾಗುವಂತೆ ಮಾಡಿದ್ದಾರೆ.

ಈವರೆಗೆ 1,17,573 ಜನರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1,10,146 ಜನರ ವರದಿ ನೆಗೆಟಿವ್‌ ಬಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 6,801ಕ್ಕೆ ತಲುಪಿದೆ. 6,478 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ತಮ್ಮ ಮನೆಗಳಿಗೆ ತೆರಳಿದ್ದಾರೆ. 156 ಕೋವಿಡ್‌ ಪ್ರಕರಣಗಳು ಸಕ್ರೀಯವಾಗಿವೆ.

ADVERTISEMENT

ಬೀದರ್ ತಾಲ್ಲೂಕಿನಲ್ಲಿ ಅತಿ ಹೆಚ್ಚು 3,009 ಜನರಿಗೆ ಕೋವಿಡ್‌ ದೃಢಪಟ್ಟಿತ್ತು ಮತ್ತು ಅತಿ ಹೆಚ್ಚು83 ಜನ ಇದೇ ತಾಲ್ಲೂಕಿನಲ್ಲಿ ಮೃತಪಟ್ಟಿದ್ದಾರೆ.

ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ತಾಯಿ–ಮಗು ಆಸ್ಪತ್ರೆ
ಗಳಲ್ಲಿ ಕೋವಿಡ್‌ ಪೀಡಿತರಿಗೆ 1,140 ಹಾಸಿಗೆಗಳು ಲಭ್ಯ ಇವೆ. ಪ್ರಸ್ತುತ 51 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 105 ಮಂದಿ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ಅವರಿಗೆ ವೈದ್ಯರು ಮೊಬೈಲ್‌ ಮೂಲಕ
ಮಾರ್ಗದರ್ಶನ ನೀಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ನಿರಂತರವಾಗಿ ಅವರ ಮೇಲ್ವಿಚಾರಣೆಯನ್ನೂ ನಡೆಸುತ್ತಿದ್ದಾರೆ.

ಬೇಸಿಗೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚಾಗಿ ಶಾಹೀನ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ವಸತಿಗೃಹ, ಝೀರಾ ಕನ್ವೆನ್‌ಷ್ಯನ್‌ ಹಾಲ್‌ ಹಾಗೂ ಹೋಟೆಲ್‌ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಲಾಗಿತ್ತು. ನಗರದ ಮೂರು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಕೊಡಲು ಮುಂದೆ ಬಂದ ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಯಾಯಿತು.

ಆರಂಭದಲ್ಲಿ ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ಕೊಡುವುದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿತ್ತು. ಅಷ್ಟೇ ಅಲ್ಲ ಬೀದರ್‌ನ ಕೋವಿಡ್‌ ಸೆಂಟರ್‌ನಲ್ಲಿ ನಗರದ ರೋಗಿಗಳ ಆರೈಕೆ ಮಾಡುವುದೇ ಕಷ್ಟಕರವಾಗಿತ್ತು. ತಾಲ್ಲೂಕು ಕೇಂದ್ರಗಳಿಂದಲೂ ಹೊಸ ರೋಗಿಗಳು ಬಂದು ದಾಖಲಾಗುತ್ತಿದ್ದರಿಂದ ಆರೋಗ್ಯ ಸೇವಾ ಸಿಬ್ಬಂದಿ ಹೈರಾಣಾರಾಗಿದ್ದರು. ಹೀಗಾಗಿ ಹುಮನಾಬಾದ್‌ ಹಾಗೂ ಬಸವಕಲ್ಯಾಣದಲ್ಲೂ ಪ್ರತ್ಯೇಕವಾಗಿ ಚಿಕಿತ್ಸೆ ಕೊಡಲು ಶುರು ಮಾಡಲಾಗಿತ್ತು.

ಪ್ರಸ್ತುತ ಕೋವಿಡ್‌ ಪೀಡಿತರ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ಸೋಂಕು ಪೂರ್ಣ ಪ್ರಮಾಣದಲ್ಲಿ ತೊಲಗಿಲ್ಲ. ಚಳಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡು ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.